ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿಗೆ ಕ್ರಮ

KannadaprabhaNewsNetwork |  
Published : Sep 13, 2026, 02:45 AM IST
ಫ‍ೋಟೋವಿವರ- (12ಎಚ್‌ಪಿಟಿ5) ಹೊಸಪಪೇಟೆ ತಾಲ್ಲೂಕಿನ ಕಮಲಾಪುರ ರೈತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ತಹಶೀಲ್ದಾರ್ ಶೃತಿ ಎಂ ಮಾಳಪ್ಪಗೌಡರ ಉದ್ಘಾಟಿಸಿದರು | Kannada Prabha

ಸಾರಾಂಶ

ಸರ್ಕಾರವೇ ಜನರ ಬಳಿಗೆ ಹೋಗಿ ಸಮಸ್ಯೆಗಳ ಆಲಿಸಬೇಕು ಎನ್ನುವ ಐತಿಹಾಸಿಕ ತೀರ್ಮಾನದೊಂದಿಗೆ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ

ಹೊಸಪೇಟೆ: ಸಾರ್ವಜನಿಕರು ತಮ್ಮ ಸಮಸ್ಯೆ, ಬೇಡಿಕೆ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಜಾಸೇವೆ ಆಂದೋಲನ ಆಯೋಜಿಸಲಾಗಿದೆ. ಅಧಿಕಾರಿಗಳು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ತಹಸೀಲ್ದಾರ್ ಶೃತಿ ಎಂ. ಮಾಳಪ್ಪಗೌಡರ ಹೇಳಿದರು.

ತಾಲೂಕಿನ ಕಮಲಾಪುರ ರೈತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರವೇ ಜನರ ಬಳಿಗೆ ಹೋಗಿ ಸಮಸ್ಯೆಗಳ ಆಲಿಸಬೇಕು ಎನ್ನುವ ಐತಿಹಾಸಿಕ ತೀರ್ಮಾನದೊಂದಿಗೆ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ. ಈ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 15 ಅರ್ಜಿ, ಶಿಕ್ಷಣ ಇಲಾಖೆ 4, ಸರ್ವೇ ಇಲಾಖೆ 2, ಕಮಲಾಪುರ ಪುರಸಭೆಗೆ ಸಂಬಂಧಿಸಿದಂತೆ 19 ಹಾಗೂ ತಾಪಂಗೆ ಸಂಬಂಧಿಸಿದ 5 ಸೇರಿದಂತೆ ಒಟ್ಟು 52 ಅರ್ಜಿ ಸಲ್ಲಿಕೆಯಾಗಿವೆ ಎಂದು ಹೇಳಿದರು.

ಸಾರ್ವಜನಿಕರು ಜಮೀನು, ಮೂಲಸೌಕರ್ಯ,ಪಿಂಚಣಿ ಹಾಗೂ ಇಲಾಖಾವಾರು ಸಮಸ್ಯೆ ಕುರಿತು ಸಲ್ಲಿಸಿರುವ ಪ್ರತಿಯೊಂದು ಅರ್ಜಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ರವಾನಿಸಿ ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಶೃತಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು, ಅಹವಾಲು ಸ್ವೀಕರಿಸಿದರು. ಕಮಲಾಪುರ ಪುರಸಭೆ ವ್ಯಾಪ್ತಿಯ ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಪೋಡಿಗಾಗಿ ಅಲೆದಾಡುತ್ತಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಸಲ್ಲಿಸಲಾದ ಅಹವಾಲಿಗೆ ಸ್ಪಂದಿಸಿದ ಅವರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು, ಶೀಘ್ರವೇ ಪೋಡಿ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತು ವಿಶೇಷಚೇತನರಿಗೆ ನೀಡಲಾಗುವ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಆಲಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ವೀರಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಜೀಮಾ ಬಾನು ಸೇರಿದಂತೆ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಕರ್ಣ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ
ಅತಿ ಶೀತ, ಉಷ್ಣ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳು