ಶೀಘ್ರದಲ್ಲಿಯೇ ಇದ್ದಲಗಿ ಗ್ರಾಮ ಸ್ಥಳಾಂತರಕ್ಕೆ ಕ್ರಮ

KannadaprabhaNewsNetwork |  
Published : Sep 02, 2026, 04:00 AM IST
(ಫೋಟೊಬಿಕೆಟಿ3,(1)ಅವಘಡದಿಂದ ಬಾಧಿತ ಕುಟುಂಬಕ್ಕೆ ಆಹಾರಧಾನ್ಯಗಳ ಕಿಟ್ಗಳನ್ನು ಸಹ ವಿತರಿಸಲಾಯಿತು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಮುಳುಗಡೆಯಿಂದ ಬಾದಿತವಾದ ಇದ್ದಲಗಿ ಗ್ರಾಮವನ್ನು ಶೀಘ್ರದಲ್ಲಿಯೇ ಸಂಪೂರ್ಣವಾಗಿ ಸ್ಥಳಾಂತರಿಸಲು ಕ್ರಮವಹಿಸಲಾಗುವುದೆಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಳುಗಡೆಯಿಂದ ಬಾದಿತವಾದ ಇದ್ದಲಗಿ ಗ್ರಾಮವನ್ನು ಶೀಘ್ರದಲ್ಲಿಯೇ ಸಂಪೂರ್ಣವಾಗಿ ಸ್ಥಳಾಂತರಿಸಲು ಕ್ರಮವಹಿಸಲಾಗುವುದೆಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಕಳೆದ 2 ದಿನಗಳ ಹಿಂದೆ ಆಕಸ್ಮಿಕ ಅಗ್ನಿ ಅವಘಡದಿಂದಾದ ಹಾನಿಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ, ಅಗ್ನಿ ಅವಘಡದಿಂದ ಉಂಟಾದ ಹಾನಿ ಪರಿಶೀಲಿಸಿ, ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಭಾನುವಾರ ರಾತ್ರಿ ಶೆಡ್‌ ಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ಅಗ್ನಿ ನಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಳುಗಡೆ ಪ್ರದೇಶವಾದ ಇದ್ದಲಗಿ ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಿದೆ. ಶೀಘ್ರದಲ್ಲಿಯೇ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ, ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಸ್ಥಳಾಂತರ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ಒಂದು ಗುಂಟೆ ಬದಲಿಗೆ ನಾಲ್ಕು ಗುಂಟೆ ಜಾಗ ನೀಡಬೇಕೆಂಬುದು ಸಂತ್ರಸ್ತರ ಪ್ರಮುಖ ಬೇಡಿಕೆಯಾಗಿದೆ. ಸಂತ್ರಸ್ತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು, ಈಗಿರುವ ಆದೇಶದಲ್ಲಿ ಅಗತ್ಯ ತಿದ್ದುಪಡಿ ಮಾಡಿಸಿ ನಾಲ್ಕು ಗುಂಟೆ ಜಾಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸೆ.4ರಂದು ಮುಖ್ಯಮಂತ್ರಿಗಳು ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಇದ್ದಲಗಿ ಸಂತ್ರಸ್ತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ನೇರವಾಗಿ ತಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಅದೃಷ್ಟವಶಾತ್, ಶ್ರಾವಣ ಮಾಸದ ಪ್ರಯುಕ್ತ ಗ್ರಾಮದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮಕ್ಕೆ ಸಂತ್ರಸ್ತರು ತೆರಳಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲವೆಂದ ಸಚಿವರು, ಸಂತ್ರಸ್ತರು ಹಲವು ವರ್ಷಗಳಿಂದ ತಾತ್ಕಾಲಿಕ ಶೆಡ್‌ ಗಳಲ್ಲಿ ವಾಸಿಸುತ್ತಿದ್ದಾರೆ.

ಅಗ್ನಿ ಅವಘಡದಿಂದ ಮನೆಗಳಲ್ಲಿದ್ದ ದವಸ-ಧಾನ್ಯ, ಬಟ್ಟೆ-ಬರೆ ಹಾಗೂ ಅಗತ್ಯ ದಾಖಲೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅಧಿಕಾರಿಗಳಿಂದ ಸಮಗ್ರವಾಗಿ ಹಾನಿ ಪರಿಶೀಲನೆ ನಡೆಸಿದ ಬಳಿಕ ಸರ್ಕಾರದ ನಿಯಮಾನುಸಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅವಘಡದಿಂದ ಬಾದಿತ ಕುಟುಂಬಗಳಿಗೆ ಸ್ಥಳಾಂತರಿಸುವವರೆಗೆ ಅದೇ ಜಾಗದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಡಲು ತುರ್ತು ಕ್ರಮವಹಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಅವಘಡದಿಂದ ಬಾಧಿತ ಕುಟುಂಬಕ್ಕೆ ಆಹಾರಧಾನ್ಯಗಳ ಕಿಟ್‌ ಗಳನ್ನು ಸಹ ವಿತರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಎಸ್ಪಿ ಸಿದ್ಧಾರ್ಥ ಗೋಯಲ್, ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ ಸಮಾಲೋಚಕರಾದ ಮಹಾದೇವ ಮುರಗಿ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾ.ಪಂ ಇಒ ಮುರಳೀಧರ ದೇಶಪಾಂಡೆ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಸಂತ್ರಸ್ತರ ಧರಣಿ ಅಂತ್ಯ: ಬೇಡಿಕೆಗೆ ಸಚಿವರ ಭರವಸೆ

ಮುಳಗಡೆ ಪ್ರದೇಶವಾದ ಇದ್ದಲ್ಲಿ ಗ್ರಾಮದಲ್ಲಿ ವಿವಿಧ ಬೇಡಿಕೆ ಈಡೇರಿಕೆ ಹಿನ್ನಲೆಯಲ್ಲಿ ಮೇ 6ರಿಂದ ಹಮ್ಮಿಕೊಂಡ ಅನಿರ್ಧಷ್ಟ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಸೂಕ್ತ ಕ್ರಮವಹಿಸುವ ಭರವಸೆಯನ್ನು ಸಂತ್ರಸ್ತರಿಗೆ ನೀಡುವ ಮೂಲಕ ಧರಣಿಯನ್ನು ಅಂತ್ಯಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಿ: ರೈತರ ಆಗ್ರಹ
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಿ: ಕರಿಗಾರ