ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದ ರೈತರು ಮಲಗಲದಿನ್ನಿ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ ಎಂ.ಎ. ಬಾಗೇವಾಡಿ ಅವರಿಗೆ ರೈತರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ ತುಂಬಿಸುವುದರಿಂದ ಪಕ್ಕದ ಚವನಭಾವಿ ಹಳ್ಳದ ಬ್ಯಾರೇಜ್ ಭರ್ತಿಯಾಗಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನ-ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಆದರೆ ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಮುಖಂಡ ಯಮನಪ್ಪ ನಾಯ್ಕೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮಂಗಳವಾರ ಆಗಮಿಸಿದ ಚವನಭಾವಿ ಗ್ರಾಮದ ರೈತರು ಹಾಗೂ ಮುಖಂಡರು, ಶಿರಸ್ತೇದಾರ ಎಂ.ಎ. ಬಾಗೇವಾಡಿ ಅವರ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಪ್ರಸ್ತುತ ಭೀಕರ ಬರಗಾಲ ಹಿನ್ನೆಲೆ ಬೆಳೆಗಳು ಕೈಕೊಟ್ಟಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕನಿಷ್ಠ ಕುಡಿಯುವ ನೀರನ್ನಾದರೂ ಒದಗಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಾಲುವೆಗೆ ನೀರು ಹರಿಸಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ಪರಿಶೀಲನೆ ನಡೆಸದ ಕಾರಣ ಮಲಗಲದಿನ್ನಿ ಕೆರೆ ಇದುವರೆಗೂ ಭರ್ತಿಯಾಗಿಲ್ಲ. ಕಾಲುವೆ ನೀರು ಅಕ್ರಮವಾಗಿ ಬಳಕೆಯಾಗುವುದನ್ನು ಹಾಗೂ ಅನಗತ್ಯವಾಗಿ ಪೋಲಾಗುವುದನ್ನು ತಕ್ಷಣವೇ ತಡೆಗಟ್ಟಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆರೆಗೆ ಸಮರ್ಪಕವಾಗಿ ನೀರು ಹರಿಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಮುಂದಿನ ಒಂದು ವಾರದೊಳಗೆ ಮಲಗಲದಿನ್ನಿ ಕೆರೆಗೆ ನೀರು ತುಂಬಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಾಲತವಾಡ–ಮುದ್ದೇಬಿಹಾಳ ಸಂಪರ್ಕಿಸುವ ಮಲಗಲದಿನ್ನಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಮುಖಂಡರಾದ ಭರಣ್ಣ ಹಂಚಿನಾಳ, ರೇವಣ್ಣಪ್ಪ ಹಂಚಿನಾಳ, ಶರಣಪ್ಪ ಮುರಾಳ, ಗೋವಿಂದಪ್ಪಗೌಡ ಪಾಟೀಲ, ಸಿದ್ದಪ್ಪ ಮದರಿ, ಪ್ರಚಂಡ ಚಲವಾದಿ, ದ್ಯಾಮಣ್ಣ ಮುರಾಳ, ವೀರೇಶ ಜಂಗಡಭಾವಿ, ಸಿದ್ದಪ್ಪ ಹಂಚಿನಾಳ, ನಿಂಗಪ್ಪ ಮಾವಿನಬಾವಿ, ಲಕ್ಷ್ಮಣ ಗುರಿಕಾರ, ಬಸಣ್ಣ ನಾಯ್ಕೋಡಿ, ನಿಂಗಪ್ಪ ಜಂಗಡಭಾವಿ, ನಿಂಗಪ್ಪ ಮದರಿ, ಹುಲಗಪ್ಪ ಜಂಗಡಭಾವಿ, ಬಸಪ್ಪ ನಾಲತವಾಡ, ಮಾಳಪ್ಪ ಬಿರಾದಾರ, ಬೀರಪ್ಪ ಸೋಮನಾಳ, ನೀಲಪ್ಪ ಮುರಾಳ ಸೇರಿದಂತೆ ಚವನಭಾವಿ ಗ್ರಾಮದ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.