ಕನ್ನಡಪ್ರಭ ವಾರ್ತೆ ಗುಳೇದಗುಡ್ಡಸಾಮಾಜಿಕ ಭದ್ರತಾ ಯೋಜನೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಿಕಲಚೇತನರು ವೃದ್ಧರು, ವಿಧವೆಯರು, ಕರವೇ, ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕರು ಮಂಗಳವಾರ ಪಟ್ಟಣದ ಬಾದಾಮಿ ನಾಕಾದಿಂದ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಾಮಾಜಿಕ ಭದ್ರತಾ ಯೋಜನೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಿಕಲಚೇತನರು ವೃದ್ಧರು, ವಿಧವೆಯರು, ಕರವೇ, ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕರು ಮಂಗಳವಾರ ಪಟ್ಟಣದ ಬಾದಾಮಿ ನಾಕಾದಿಂದ ಪ್ರತಿಭಟನೆ ನಡೆಸಿದರು.

ತಹಸಿಲ್ದಾರ್ ಕಚೇರಿ ಎದುರಿನ ರಾಜ್ಯ ಹೆದ್ದಾರಿಯಲ್ಲಿ ಬಸ್ ಸೇರಿದಂತೆ ಎಲ್ಲ ವಾಹನಗಳನ್ನು ತಡೆದು ಸರ್ಕಾರದ ರವಿರುದ್ಧ ಘೋಷಣೆ ಕೂಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು ಧರಣಿ ಕುಳಿತರು.

ನಡೆದಾಡಲು ಬಾರದ ವಿಕಲಚೇತನರ ಹಾಗೂ ದುಡಿಯಲು ಸಾಧ್ಯವಾಗದ ವೃದ್ಧರು, ವಿಧುವೆಯರ ಮಾಸಾಶನವನ್ನು ಸರ್ಕಾರ ತಡೆ ಹಿಡಿದಿದೆ. ಕೆಲವರ ಮಾಸಾಶನ ಸಂಪೂರ್ಣ ಬಂದ್ ಮಾಡಿದ್ದಾರೆ. ಇದರಿಂದ ಸಾಮಾಜಿಕ ಭದ್ರತೆ ಫಲಾನುಭವಿಗಳು ಸಾಕಷ್ಟು ತೊಂದರೆಯಲ್ಲಿದ್ದು, ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇಂತಹ ಸಮಸ್ಯೆ ನೋಡಿ, ನೋಡದಂತೆ ಕುಳಿತಿದ್ದಾರೆ ಎಂದು ಪ್ರತಿಭಟನಾಕಾರ ಮುಖಂಡ, ಕರವೇ ಅಧ್ಯಕ್ಷ ಸರ್ಕಾರದ ವಿರುದ್ಧ ಹರಿಹಾಯ್ದರು.

ಕಳೆದ 6-7 ತಿಂಗಳಿಂದ ಮಾಸಾಶನ ಸ್ಥಗಿತವಾಗಿವೆ. ತಹಸೀಲ್ದಾರ್ ಕಚೇರಿಗೆ ಅಲೆದಾಡಿ ಸಾಕಾಗಿದೆ. ಆದರೆ, ಮಾಸಾಶನ ಮಾತ್ರ ಆರಂಭಗೊಳ್ಳುತ್ತಿಲ್ಲ. ಇದರಿಂದ ನಮ್ಮ ಬದುಕು ತೀರ ಹದಗೆಟ್ಟಿದೆ. ನಮ್ಮ ಮಾಸಾಶನ ಪುನಾರಂಭ ಆಗುವವರೆಗೆ ನಾವು ರಸ್ತೆ ಬಿಟ್ಟು ತೆರಳುವುದಿಲ್ಲ ಎಂದು ಮಾಸಾಶನ ಬಂದ್ ಆಗಿರುವ ಫಲಾನುಭವಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಸ್ಪಂದಿಸಿದ ತಹಸೀಲ್ದಾರ್‌ ಎಸ್.ಎಫ್.ಬೊಮ್ಮಣ್ಣವರ್ ಅವರು ಕ್ಷಣಾರ್ಧದಲ್ಲಿಯೇ ಬಂದ್ ಆಗಿದ್ದ ತಾಲೂಕಿನ 548 ಮಾಸಾಶನಗಳ ಪೈಕಿ, ಪಟ್ಟಣದ 25, ಗ್ರಾಮೀಣ 50 ಹೀಗೆ 75 ಫಲಾನುಭವಿಗಳ ಮಾಸಾಶನಗಳನ್ನು ತಕ್ಷಣ ಪುನರಾರಂಭಿಸಿದರು. ಉಳಿದವುಗಳನ್ನು ನಿತ್ಯ ಹಂತ ಹಂತವಾಗಿ ಪುನರಾರಂಭಿಸುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.

ಕರವೇ ಅಧ್ಯಕ್ಷ ರವಿ ಅಂಗಡಿ, ಶ್ರೀಕಾಂತ ಹುನಗುಂದ, ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ಹೆಗಡಿ, ನಿಂಗಪ್ಪ ಎಣ್ಣಿ ಸೇರಿ ಅನೇಕ ಮುಖಂಡರು, ಸಾಮಾಜಿಕ ಭದ್ರತೆ ಮಾಸಾಶನ ಬಂದ್ಆ ಗಿರುವ ಫಲಾನುಭವಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.