ಬೆಂಗಳೂರು : ವಿವಾದಿತ ಮಾಂಸದ ವಿಚಾರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಕೆಎಸ್‌ಆರ್) ಶುಕ್ರವಾರ ನಡೆದ ಗಲಾಟೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ರಾಷ್ಟ್ರ ರಕ್ಷಣೆ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಗುಂಪುಗೂಡುವುದು, ಅಕ್ರಮ ವಿಚಾರಣೆ, ಪ್ರಚೋದನೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ಜೀವ ಬೆದರಿಕೆ, ನಿಂದನೆ, ಹಲ್ಲೆ ಸೇರಿದಂತೆ ವಿವಿಧ ಆರೋಪದಡಿ ಎರಡು ಪ್ರಕರಣ ಮತ್ತು ರಾಜಸ್ಥಾನದ ಮಾಂಸ ಪೂರೈಕೆದಾರರ ವಿರುದ್ಧ ಹಾನಿಕಾರಕ ಆಹಾರ ಪೂರೈಕೆ ಆರೋಪದಡಿ ಒಂದು ಪ್ರಕರಣ ಸೇರಿ ಒಟ್ಟು ಮೂರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೋಟಿಸ್:
ವಿವಾದಿತ ಮಾಂಸದ ಪೂರೈಕೆ ಸಂಬಂಧ ರಾಜಸ್ಥಾನದ ಮಾಂಸದ ವ್ಯಾಪಾರಿಗಳ ಮಾಹಿತಿ ಪಡೆದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗುವುದು. ಈಗಾಗಲೇ ಆಹಾರ ಇಲಾಖೆ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಬಂಧನ:
ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಶುಕ್ರವಾರ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಜನರನ್ನು ಗುಂಪು ಗೂಡಿಸಿ ರಾಜಸ್ಥಾನದಿಂದ ರೈಲಿನಲ್ಲಿ ತಂದಿದ್ದ ಬಾಕ್ಸ್‌ಗಳಲ್ಲಿ ನಾಯಿ ಮಾಂಸವಿದೆ. ಈ ಮಾಂಸ ತಿನ್ನಲು ಯೋಗ್ಯವಲ್ಲ. ನಗರದ ಕೆಲ ಮಾಂಸದ ವ್ಯಾಪಾರಿಗಳು ಹೊರರಾಜ್ಯದಿಂದ ನಗರಕ್ಕೆ ಕಳಪೆ ಗುಣಮಟ್ಟದ ಮಾಂಸ ತಂದು ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕೂಗಾಡಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಅಂತೆಯೇ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಕೆಲ ಮಾಂಸ ವ್ಯಾಪಾರಿಗಳಿಗೆ ಬೆದರಿಕೆ ಹಾಕಿದ್ದಾರೆ.
ಪರಾರಿಗೆ ಯತ್ನ ಆರೋಪ:
ಸಾರ್ವಜನಿಕ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟು ಮಾಡಿದ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆತರುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಚಲಿಸುವ ವಾಹನದ ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಬಳಿಕ ಠಾಣೆಯಲ್ಲಿ ವಿಚಾರಣೆಗೆ ಸ್ಪಂದಿಸದೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಅಂತೆಯೇ ಪೊಲೀಸರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ವಸ್ಥ ಪುನೀತ್ ಆಸ್ಪತ್ರೆಗೆ ದಾಖಲು
ಶುಕ್ರವಾರ ತಡರಾತ್ರಿ ಪೊಲೀಸ್ ವಶದಲ್ಲಿ ಇರುವಾಗ ಪುನೀತ್ ಕೆರೆಹಳ್ಳಿ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಕೆರೆಹಳ್ಳೀ 14 ದಿನ ನ್ಯಾಯಾಂಗ ಬಂಧನ
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಠಾಣೆ ಪೊಲೀಸರು ಆರೋಪಿ ಪುನೀತ್ ಕೆರೆಹಳ್ಳಿಯನ್ನು ಶನಿವಾರ ರಾತ್ರಿ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.