ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಹೌದು, ಪಟ್ಟಣದ ಹಲವು ಬಡಾವಣೆ, ಸರ್ಕಲ್‌ಗಳು ಸೇರಿದಂತೆ ಬೀದಿ ಬದಿಯ ಎಗ್‌ರೈಸ್ ಸೆಂಟರ್, ಮೂಳೆ ಮಾಂಸದ ಅಂಗಡಿಗಳ ಬಳಿ ನಿತ್ಯ ನೂರಾರು ನಾಯಿಗಳಿವೆ. ಕೆಲ ಬಡಾವಣೆಗಳಲ್ಲಿ ಚಿಕ್ಕ ಮಕ್ಕಳು ಮನೆಯಿಂದ ಹೊರಗೆ ಬಾರದಂತಹ ಪರಿಸ್ಥಿತಿ ಇದೆ. ಪಾಲಕರಿಗೆ ತಮ್ಮ ಮಕ್ಕಳನ್ನು ನಾಯಿಗಳಿಂದ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಂತೂ ಜೋರಾಗಿಯೇ ಇದೆ. ಹಿಂಡು ಹಿಂಡಾಗಿ ಅಲೆಯುತ್ತಿದ್ದು, ಬೈಕ್ ಸವಾರರನ್ನು ಬೆನ್ನತ್ತಿ ಕಚ್ಚುತ್ತವೆ. ಜೀವದ ಭಯದಲ್ಲೇ ಬೈಕ್ ಸವಾರರು ಓಡಾಡುತ್ತಿದ್ದಾರೆ. ವಾಹನಗಳಿಗೆ ಅಡ್ಡ ಬಂದು ಸವಾರರಿಗೆ ಪ್ರಾಣಾಪಾಯ ಉಂಟು ಮಾಡುವ ಘಟನೆಗಳು ಹೆಚ್ಚಾಗಿವೆ.ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್, ಸೋಗಿ ಸರ್ಕಲ್ ಹತ್ತಿರದ ಬಡಾವಣೆ, ಸೊಪ್ಪಿನ ಕಾಳಮ್ಮ ಬಡಾವಣೆ, ಬಸವೇಶ್ವರ ನಗರ ಇತರೆ ಬಡಾವಣೆ, ಮುಖ್ಯ ರಸ್ತೆಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಒಂಟಿಯಾಗಿ ಓಡಾಡಲು ಭಯಪಡುತ್ತಾರೆ. ರಾತ್ರಿಯಂತೂ ಮುಖ್ಯ ಸರ್ಕಲ್ ಗಳಲ್ಲೇ ಜನರ ಓಡಾಟ ಕಷ್ಟವಾಗಿದೆ. ಬೈಕ್ ಬೆನ್ನಟ್ಟಿ ಅಪಾಯ ಉಂಟು ಮಾಡುತ್ತಿವೆ. ಓಣಿಗಳಲ್ಲಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಮೂಳೆ ಮಾಂಸದ ರುಚಿ ಕಂಡ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ. ಪುರಸಭೆಯವರು ಬೀದಿ ಬದಿಯ ಎಗ್‌ರೈಸ್, ಕಬಾಬ್ ಸೆಂಟರ್‌ಗಳಿಗೆ ಕಡಿವಾಣ ಹಾಕುತ್ತಿಲ್ಲ. ಬೀದಿ ನಾಯಿ ನಿಯಂತ್ರಿಸುತ್ತಿಲ್ಲ ಎಂದು ಜನ ದೂರುತ್ತಾರೆ.
ಬೀದಿ ನಾಯಿಗಳನ್ನು ಮಾರ್ಗಸೂಚಿ ಪ್ರಕಾರ ನಿಯಂತ್ರಿಸಬೇಕಿದ್ದು, ಇತ್ತೀಚೆಗೆ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಹತ್ತಿರ ಬೀಡು ಬಿಟ್ಟಿದ್ದ 72 ನಾಯಿಗಳನ್ನು ಸೆರೆ ಹಿಡಿದು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಬೀದಿನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಆರೈಕೆಗೆ ಟೆಂಡರ್ ಕರೆಯಲಾಗಿದೆ ಎಂದು ಹೂವಿನಹಡಗಲಿ ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಸೋಮಶೇಖರ್ ತಿಳಿಸಿದ್ದಾರೆ.