ಮಾಧ್ಯಮ ಒಂದು ಪ್ರವೃತ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡಲಿ

KannadaprabhaNewsNetwork |  
Published : Jul 31, 2026, 01:30 AM IST
ತಹಸಿಲ್ದಾರ್ ಎಂ. ಮಮತಾ | Kannada Prabha

ಸಾರಾಂಶ

ಮಾಧ್ಯಮ ರಂಗವು ಕೇವಲ ಒಂದು ವೃತ್ತಿಯಾಗದೆ, ಸಮಾಜಮುಖಿ ಪ್ರವೃತ್ತಿಯಾದಾಗ ಸಮಾಜಕ್ಕೆ ಹಾಗೂ ಆಡಳಿತಕ್ಕೆ ಅತ್ಯಂತ ಉಪಯುಕ್ತವಾದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಎಂ. ಮಮತಾ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಮಾಧ್ಯಮ ರಂಗವು ಕೇವಲ ಒಂದು ವೃತ್ತಿಯಾಗದೆ, ಸಮಾಜಮುಖಿ ಪ್ರವೃತ್ತಿಯಾದಾಗ ಸಮಾಜಕ್ಕೆ ಹಾಗೂ ಆಡಳಿತಕ್ಕೆ ಅತ್ಯಂತ ಉಪಯುಕ್ತವಾದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಎಂ. ಮಮತಾ ಅವರು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಿಕ್ಕನಾಯಕನಹಳ್ಳಿ ತಾಲೂಕು ಘಟಕದ ವತಿಯಿಂದ ಪಟ್ಟಣದ ರೋಟರಿ ಕನ್ವೆನ್ಷನ್ ಹಾಲ್‌ನಲ್ಲಿ, ರೋಟರಿ ಕ್ಲಬ್ ಹಾಗೂ ಸುವರ್ಣಮುಖಿ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಧ್ಯಮಗಳು ಅಧಿಕಾರಿಗಳನ್ನು ಹಾಗೂ ಜವಾಬ್ದಾರಿಯುತ ವ್ಯಕ್ತಿಗಳನ್ನು ಪ್ರಶ್ನಿಸುವ ಮತ್ತು ಅವರ ಜವಾಬ್ದಾರಿಯನ್ನು ನೆನಪಿಸುವ ಪ್ರಬಲ ಸಾಧನವಾಗಿವೆ. ಈ ಮಾಧ್ಯಮದ ಸದ್ಬಳಕೆಯಾಗುವುದು ಅತ್ಯಂತ ಅಗತ್ಯ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಬಿಳಿ ಹಾಳೆಯ ಮೇಲಿಡುವ ಒಂದು ಸಣ್ಣ ಚುಕ್ಕೆಯು ಎಲ್ಲರ ಗಮನ ಸೆಳೆಯುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಸಂಕುಚಿತ ಮನೋಭಾವನೆ ಇರಬಾರದು. ವಿಶಾಲವಾದ ದೃಷ್ಟಿಕೋನ ಹೊಂದಿದ್ದಾಗ ಮಾತ್ರ ಅನೇಕ ಗುಣಾತ್ಮಕ ವಿಚಾರಗಳು ಬೆಳಕಿಗೆ ಬರಲು ಸಾಧ್ಯ. ಸತ್ಯ ಮತ್ತು ವಾಸ್ತವ ಅಂಶಗಳನ್ನು ನೇರವಾಗಿ, ನಿಷ್ಠುರವಾಗಿ ವರದಿ ಮಾಡುವುದು ಕೇವಲ ಶೀರ್ಷಿಕೆ ಅಥವಾ ಮಾತುಗಳಿಗೆ ಸೀಮಿತವಾಗಿರದೆ, ಪ್ರಕಟವಾಗುವ ಪ್ರತಿಯೊಂದು ವರದಿಯಲ್ಲೂ ಎದ್ದು ಕಾಣಬೇಕು. ಅಧಿಕಾರಿಗಳು ಅಥವಾ ಜವಾಬ್ದಾರಿಯುತ ವ್ಯಕ್ತಿಗಳು ಎಲ್ಲೇ ತಪ್ಪು ಮಾಡಿದರೂ ನೇರವಾಗಿ ಎಚ್ಚರಿಸುವ ಕೆಲಸವಾಗಲಿ, ಆದರೆ ಅದು ಯಾವುದೇ ಕಾರಣಕ್ಕೂ ವೈಯಕ್ತಿಕ ತೇಜೋವಧೆಯ ಹಂತಕ್ಕೆ ತಲುಪಬಾರದು ಎಂದರು.

ಶ್ರೀ ಸಿದ್ಧಾರ್ಥ ಮಾಧ್ಯಮ ಸಂಸ್ಥೆಯ ನಿರ್ದೇಶಕರಾದ ಡಾ . ಬಿ.ಟಿ.ಮುದ್ದೇಶ್ ಮಾತನಾಡುತ್ತಾ ಇಂದಿನ ತಂತ್ರಜ್ಞಾನ ನಾವು ಕೇಳುವುದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ನೀಡುವ ಮಟ್ಟಕ್ಕೆ ಬೆಳೆದಿದೆ. ತಂತ್ರಜ್ಞಾನ ವರವೂ ಹೌದು, ಶಾಪವೂ ಹೌದು. ಮಾನವನ ಚಿಂತನೆ, ವಿವೇಚನೆ ಮತ್ತು ಸೃಜನಶೀಲತೆಗೆ ಪರ್ಯಾಯವಾಗಿ ಯಾವುದೇ ತಂತ್ರಜ್ಞಾನ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯ ಪ್ರತಿನಿಧಿ ಚಿ.ನಿ. ಪುರುಷೋತ್ತಮ್, ಜಿಲ್ಲಾಧ್ಯಕ್ಷ ಯೋಗೀಶ್ ಮಾತನಾಡಿ, ಬ್ಲ್ಯಾಕ್‌ ಮೇಲ್ ಮಾಡುವ ಪತ್ರಕರ್ತರನ್ನು ಸಂಘದಿಂದ ದೂರವಿಟ್ಟು ಶಿಸ್ತು ಕಾಪಾಡಲಾಗುತ್ತಿದೆ. ಪತ್ರಕರ್ತರ ಆರೋಗ್ಯ ನಿಧಿ ಸ್ಥಾಪಿಸಿದ್ದು, ಖಾಸಗಿ ಶಾಲೆಗಳಲ್ಲಿ ಉಚಿತ ಹಾಗೂ ರಿಯಾಯಿತಿ ಶಿಕ್ಷಣ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗಿದೆ. ಗ್ರಾಮೀಣ ಮಟ್ಟದಲ್ಲೂ ಆರೋಗ್ಯ ವಿಮೆ ಸೌಲಭ್ಯ ವಿಸ್ತರಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಜಿಲ್ಲಾ ಕಾರ್ಯದರ್ಶಿ ಟಿ ಇ ರಘುರಾಮ್, ರೋಟರಿ ಅಧ್ಯಕ್ಷ ಎಂ.ಬಿ. ನಾಗರಾಜು, ಬಿಇಒ ಕಾಂತರಾಜು, ಸಿ ಎನ್ ಪ್ರಸನ್ನ ಕುಮಾರ್, ಜಿ. ಮಹಾಲಿಂಗಯ್ಯ, ಸಿ ಡಿ ಸುರೇಶ್, ಚೇತನ್ ಪ್ರಸಾದ್ , ಹಿರಿಯ ಸಾಹಿತಿ ಎಂ ವಿ ನಾಗರಾಜು, ಜಯಣ್ಣ, ಮಧು, ತಾಲೂಕು ಸಂಘದ ಎಲ್ಲಾ ಪಧಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಯಲ್ಲಿ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮ
ಲಯನ್ಸ್ ಸಂಸ್ಥೆಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅನಿಲ್ ಕುಮಾರ್ ಪದಗ್ರಹಣ