ಮೀಡಿಯಾ ಸೂಪರ್ ಕಿಂಗ್ಸ್ ತಂಡ ಪ್ರಥಮ

KannadaprabhaNewsNetwork |  
Published : May 21, 2024, 12:33 AM IST
ಪ್ರಥಮ ಬಹುಮಾನ | Kannada Prabha

ಸಾರಾಂಶ

ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಯಿತು. 6 ತಂಡಗಳು ಪಾಲ್ಗೊಂಡಿದ್ದವು. ಸಂಜೆ ನಡೆದ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಪಂದ್ಯಾವಳಿಗೆ ಚಾಲನೆ ನೀಡಿದರು.

ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ 6 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಇಸ್ಮಾಯಿಲ್ ಕಂಡಕೆರೆ‌ ಮಾಲೀಕತ್ವದ ಮುಸ್ತಾಪ ನಾಯಕತ್ವದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಪ್ರಥಮ ಸ್ಥಾನ ಗಳಿಸಿತು.

ಜಯಪ್ರಕಾಶ್ ಮಾಲೀಕತ್ವದ ಶಿವರಾಜ್ ನಾಯಕತ್ವದ ಸೆನ್ಸಾ ತಂಡ ದ್ವಿತೀಯ ಸ್ಥಾನ, ಮಂಜು ಸುವರ್ಣ ಮಾಲೀಕತ್ವದ, ಆದರ್ಶ್ ನಾಯಕತ್ವದ ಟೀಂ ನಾಟೌಟ್ ತೃತೀಯ, ವಿಶ್ವ ಕುಂಬೂರು ಮಾಲೀಕತ್ವದ ಕೆ.ಎಂ.ವಿನೋದ್ ನಾಯಕತ್ವದ ವಿ.ತ್ರಿ.ತಂಡ ನಾಲ್ಕನೇ ಸ್ಥಾನ ಗಳಿಸಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ವಿಜೇತ ತಂಡಗಳಿಗೆ‌ ಬಹುಮಾನ‌ ವಿತರಿಸಿದರು.

ನಂತರ ಮಾತನಾಡಿದ ಅವರು, ಯಾವುದೇ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಒತ್ತಡದ ಕೆಲಸ ನಡುವೆ ಬಿಡುವು‌ ಮಾಡಿಕೊಂಡು ಸಂಭ್ರಮಿಸಲು ಕ್ರೀಡೆಗಳಿಂದ ಸಹಕಾರಿಯಾಗಲಿದೆ. ಕ್ರೀಡಾಕೂಟ ಎಲ್ಲರಲ್ಲಿ ಸಾಮರಸ್ಯ‌ ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಮಾಧ್ಯಮಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಮಾಜಮುಖಿಯಾಗಿ‌ ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಬರೆಯುವ ಮೂಲಕ ಸಮಾಜದ ಪರಿವರ್ತನೆಗೆ ಕಾರಣವಾಗಬೇಕಾಗಿದೆ ಎಂದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ವ್ಯಕ್ತಪಡಿಸಿದರು.

ರಾಜ್ಯ ಸಮಿತಿ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರ ಸಂಘಟನೆ ಉತ್ತಮ ಉದ್ದೇಶದಿಂದ ಆರಂಭಿಸಿದ ಕ್ರಿಕೆಟ್ ಪಂದ್ಯಾವಳಿ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಮುನ್ನಡೆದುಕೊಂಡು‌ ಬರುತ್ತಿರುವುದು ಶ್ಲಾಘನೀಯ ವಿಚಾರ ಎಂದರು. ವಿಷಯಾಧಾರಿತ ವರದಿಗಳು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಲಿ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಬೆಳ್ಳಿಹಬ್ಬದ ಅಂಗವಾಗಿ ಕುಶಾಲನಗರ ತಾಲೂಕು ಸಂಘದಿಂದ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್, ಬೆಳ್ಳಿ ಹಬ್ಬದ ಅಂಗವಾಗಿ ಒಟ್ಟು 25 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆ ಹೊಂದಿರುವ ಬಗ್ಗೆ ಮಾಹಿತಿ ಒದಗಿಸಿದರು. ಸಂಘದ ಕ್ರೀಡಾ ಸಮಿತಿ ಮೂಲಕ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಮಾತನಾಡಿ, 25 ಸಂವತ್ಸರ ಕಂಡ ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಪ. ಪಂ. ಮಾಜಿ ಸದಸ್ಯ ಜೋಸೆಫ್ ವಿಕ್ಟರ್ ಸೋನ್ಸ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ, ತಾಲೂಕು ಸಂಚಾಲಕ ಶಿವರಾಜ್ ‌ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳದಿ ಮಾರ್ಗ: 9 ಮೆಟ್ರೋ ನಿಲ್ದಾಣ ಬಳಿ ಹೊಸ ಬಿಎಂಟಿಸಿ ನಿಲ್ದಾಣ
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌