ರಾಜಕಾರಣಕ್ಕೆ ಮೆಡಿಕಲ್ ಕಾಲೇಜು ವೇದಿಕೆ ಆಗುವುದಾದರೆ ಅಭಿವೃದ್ಧಿ ಹೇಗೆ ಸಾಧ್ಯ?
ಕನ್ನಡಪ್ರಭ ವಾರ್ತೆ ಕಡೂರುಮಾಜಿ ಸಚಿವ ಸಿ.ಟಿ.ರವಿ ಮತ್ತು ಹಾಲಿ ಶಾಸಕ ಎಚ್.ಡಿ.ತಮ್ಮಯ್ಯ ಅವರ ರಾಜಕೀಯ ಕಿತ್ತಾಟಕ್ಕೆ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಬಲಿಯಾಗದಿರಲಿ ಎಂದು ಶಾಸಕ ಕೆ.ಎಸ್.ಆನಂದ್ ಒತ್ತಾಯಿಸಿದರು.ಶನಿವಾರ ಸುದ್ದಿಗೋಷ್ಠಿ ನಡೆಸಿ ಸರ್ಕಾರಿ ಮೆಡಿಕಲ್ ಕಾಲೇಜು ಕೇವಲ ಚಿಕ್ಕಮಗಳೂರಿಗೆ ಸೀಮಿತವಲ್ಲ, ದೇಶದ ಎಲ್ಲ ಕಡೆಯ ವಿದ್ಯಾರ್ಥಿಗಳು ಇಲ್ಲಿ ಬಂದು ಕಲಿಯುತ್ತಾರೆ. ಇವರ ಕಿತ್ತಾಟಕ್ಕೆ ಹಾಗೂ ರಾಜಕಾರಣಕ್ಕೆ ಮೆಡಿಕಲ್ ಕಾಲೇಜು ವೇದಿಕೆ ಆಗುವುದಾದರೆ ಅಭಿವೃದ್ಧಿ ಹೇಗೆ ಸಾಧ್ಯ?. ಸಿ.ಟಿ.ರವಿ ಕಾಲೇಜಿಗೆ ಅಭಿವೃದ್ಧಿ ಪರಿಶೀಲಿಸಲಿಕ್ಕೆ ತೆರಳಿಲ್ಲ. ಬದಲಿಗೆ ಗುತ್ತಿಗೆದಾರರಿಂದ ಕಮೀಷನ್ ಹಣ ಪಡೆಯಲು ತೆರಳಿದ್ದರು ಎಂದು ಆರೋಪಿಸಿದರು. ವೈದ್ಯಕೀಯ ಶಿಕ್ಷಣ ಸಚಿವರು ಜಿಲ್ಲೆಯ ಎಲ್ಲ 5 ಜನ ಶಾಸಕರು, ಜನಪ್ರತಿನಿಧಿಗಳ ಸಭೆ ನಡೆಸಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸುತ್ತೇನೆ. ರಾಜಕಾರಣಕ್ಕೆ ಮೆಡಿಕಲ್ ಕಾಲೇಜು ಅಥವಾ ವೈದ್ಯಕೀಯ ಸಂಸ್ಥೆಯನ್ನು ಬಳಸಿಕೊಳ್ಳುವುದು ಜಿಲ್ಲೆಯ ಅಭಿವೃದ್ಧಿಗೆ ದ್ರೋಹ ಬಗೆದಂತೆ ಎಂದು ಸಿ.ಟಿ.ರವಿ ವಿರುದ್ಧ ಕಿಡಿ ಕಾರಿದರು.ಇದೇ ಸಂದರ್ಭದಲ್ಲಿ ಸಿ.ಟಿ.ರವಿ ಸಾಮಾನ್ಯ ಜ್ಞಾನ ಇರುವ ಯಾರೂ ಬಳಸದ ನಿಷೇಧಿತ ಪದ ಬಳಸಿ ಸವಿತಾ ಸಮಾಜದವರನ್ನು ಅಪಮಾನಗೊಳಿಸಿದ್ದಾರೆ. ಈ ಹಿಂದೆ ವಿಕೃತ ಮನಸ್ಥಿತಿ ಇರುವವರು ಬಳಸುತ್ತಿದ್ದ ಪದವನ್ನು ನಾಲ್ಕು ಬಾರಿ ಶಾಸಕ, ಈಗ ಎಂಎಲ್ಸಿ ಆಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಬಳಸಿದ್ದು, ಇವರಿಗೆ ಶೋಷಿತ ಕೆಳವರ್ಗಗಳ ಬಗ್ಗೆ ಇರುವ ಧೋರಣೆಗೆ ಸಾಕ್ಷಿಯಾಗಿದೆ. ಇಂತಹ ವ್ಯಕ್ತಿ ಅಥವಾ ಅವರು ಪ್ರತಿನಿಧಿಸುವ ಪಕ್ಷಕ್ಕೆ ಮತ ಹಾಕಬೇಕೇ ಎಂದು ಜನ ಯೋಚಿಸಬೇಕು. ಹಿಂದುಳಿದ ವರ್ಗಗಳ ನಾಯಕರ ಬಗ್ಗೆ, ಮುಖ್ಯಮಂತ್ರಿ ಮತ್ತು ನೆಹರೂ ಅವರ ಬಗ್ಗೆ ಕೀಳು ಅಭಿರುಚಿಯಲ್ಲಿ ಕಡಿಯುವ, ಕತ್ತರಿಸುವ ಬಗ್ಗೆ ಮಾತನಾಡುವ ಸಿ.ಟಿ.ರವಿ ಮೊದಲು ತಮ್ಮ ವ್ಯಕ್ತಿತ್ವದ ಅವಲೋಕನ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಷೇಧಿತ ಪದ ಬಳಸಿದ ಮಾಜಿ ಶಾಸಕನ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಕೊಳ್ಳಬೇಕಿತ್ತು. ಆದರೆ ಅವರು ಕರ್ತವ್ಯ ಲೋಪ ಎಸಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂತಹವರು ಜಿಲ್ಲೆ ರಕ್ಷಣೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸದಿದ್ದರೆ ಮುಂದಿನ ದಿನಗಳಲ್ಲಿ ಎಸ್ಪಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ಶಾಸಕರಿಗೇ ಒಬ್ಬ ಗನ್ ಮ್ಯಾನ್ ಕೊಡಲಾಗುತ್ತದೆ. ಆದರೆ ಸೋತು ಹಿಂಬಾಗಿಲಿನ ಮೂಲಕ ಶಾಸಕ ನಾಗಿರುವ ಸಿ.ಟಿ.ರವಿಗೆ ಇಬ್ಬರು ಗನ್ ಮ್ಯಾನ್ ಮತ್ತು ಮನೆ ಕಾಯಲು ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿದೆ. ಇವರ ಮನೆ ಕೆಲಸ ಮಾಡುವವರು ಎಲ್ಲ ಪೊಲೀಸರೇ ಆಗಿದ್ದಾರೆ. ಪೊಲೀಸರೇನು ಜನಪ್ರತಿನಿಧಿಗಳ ಗುಲಾಮರೇ ಎಂದು ಆನಂದ್ ರಕ್ಷಣೆಯನ್ನು ಪೊಲೀಸರು ಹಿಂಪಡೆಯಲಿ, ರವಿ ಬೇಕಿದ್ದರೆ ಖಾಸಗಿ ಅಂಗರಕ್ಷಕರು, ಬೌನ್ಸರ್ ಗಳನ್ನು ನೇಮಿಸಿಕೊಳ್ಳಲಿ ಎಂದು ಹೇಳಿದರು. ಕಡೂರಿನಲ್ಲಿ ಸರಗಳ್ಳತನ, ಅಡಕೆ, ತೆಂಗು ಕಳವು ಪ್ರಕರಣಗಳು ಹೆಚ್ಚುತ್ತಿವೆ. ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಲಿಕ್ಕೆ ಇವರಿಗೆ ವ್ಯವಧಾನವಿಲ್ಲ. ಶ್ರೀಮಂತರು ಧರಣಿ ಕುಳಿತರೆ ಮಧ್ಯರಾತ್ರಿ ಬಂದು ಮನೆಗೆ ಹೋಗಿ ಎಫ್ಐಆರ್ ದಾಖಲಿಸಿಕೊಂಡು ಬರುತ್ತಾರೆ. ಇದು ಇವರ ಕಾರ್ಯ ವೈಖರಿ. ಬಡಜನರ ರಕ್ಷಣೆಗೆ ನಿರ್ಲಕ್ಷ್ಯ ಧೋರಣೆ ತೋರುತ್ತಾರೆ ಎಂದು ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಮೋಹನ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ ಇದ್ದರು.
1ಕೆಕೆಡಿಯು2ಕಡೂರು ತಾಲೂಕಿನ ಶಾಸಕ ಕೆ.ಎಸ್ ಆನಂದ್