ಪ್ರವಾಸಿ ತಾಣಗಳಲ್ಲಿ ವೀಕೆಂಡ್‌ ರಶ್‌!

KannadaprabhaNewsNetwork |  
Published : Nov 03, 2025, 02:03 AM IST

ಸಾರಾಂಶ

ಕನ್ನಡ ರಾಜ್ಯೋತ್ಸವ, ವಾರಾಂತ್ಯದಿಂದಾಗಿ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಜನರು, ಭಕ್ತರಿಂದ ತುಂಬಿ ಹೋಗಿದ್ದವು. ಬೆಂಗಳೂರು ಮತ್ತು ಇಲ್ಲಿಗೆ ಸಮೀಪದ ಪ್ರವಾಸಿ ತಾಣಗಳು, ಹಂಪಿಗಳಲ್ಲಿ ಜನ ಸಾಗರವೇ ಇತ್ತು. ಮಳೆಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿ ವ್ಯಾಪ್ತಿಯ ಕಡಲ ತೀರಗಳಲ್ಲಿ ಹೆಚ್ಚಿನ ಪ್ರವಾಸಿಗರು ಕಂಡು ಬರಲಿಲ್ಲ. ಎಂದಿನಂತೆ ಸಾಮಾನ್ಯ ಸ್ಥಿತಿ ಇತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ರಾಜ್ಯೋತ್ಸವ, ವಾರಾಂತ್ಯದಿಂದಾಗಿ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಜನರು, ಭಕ್ತರಿಂದ ತುಂಬಿ ಹೋಗಿದ್ದವು. ಬೆಂಗಳೂರು ಮತ್ತು ಇಲ್ಲಿಗೆ ಸಮೀಪದ ಪ್ರವಾಸಿ ತಾಣಗಳು, ಹಂಪಿಗಳಲ್ಲಿ ಜನ ಸಾಗರವೇ ಇತ್ತು. ಮಳೆಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿ ವ್ಯಾಪ್ತಿಯ ಕಡಲ ತೀರಗಳಲ್ಲಿ ಹೆಚ್ಚಿನ ಪ್ರವಾಸಿಗರು ಕಂಡು ಬರಲಿಲ್ಲ. ಎಂದಿನಂತೆ ಸಾಮಾನ್ಯ ಸ್ಥಿತಿ ಇತ್ತು.

ಬೆಂಗಳೂರಿನ ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌, ನಂದಿ ಬೆಟ್ಟ, ರಾಮನಗರದ ರಾಮದೇವರ ಬೆಟ್ಟ, ರೇವಣ್ಣಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯ, ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ, ಸಾವನದುರ್ಗ ಬೆಟ್ಟ ಮತ್ತು ಕನಕಪುರ ತಾಲೂಕಿನ ಸಂಗಮ, ಮೇಕೆದಾಟು ಮತ್ತು ಚುಂಚಿ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಕಂಡು ಬಂದರು.

ಇನ್ನು ವಿಶ್ವ ವಿಖ್ಯಾತ ಹಂಪಿಯಲ್ಲಿ ಪ್ರವಾಸಿಗಳ ದಂಡೇ ಇತ್ತು. ಸ್ಮಾರಕಗಳ ವೀಕ್ಷಣೆಗೆ ಶನಿವಾರ ಹಾಗೂ ಭಾನುವಾರ 1 ಲಕ್ಷಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ.

ಇನ್ನು ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಇನ್ನು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳಲ್ಲಿ ವಾರಾಂತ್ಯದಲ್ಲಿ ಸಾಧಾರಣಕ್ಕಿಂತ ತುಸು ಹೆಚ್ಚಿನ ಪ್ರವಾಸಿಗರು ಕಂಡುಬಂದರು.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ವಿಜಯ ವಿಠಲ ದೇವಾಲಯ, ಸಪ್ತಸ್ವರ ಮಂಟಪ, ಕಲ್ಲಿನತೇರು, ಪುರಂದರದಾಸರ ಮಂಟಪ, ವಿಷ್ಣು ದೇವಾಲಯ, ವಿರೂಪಾಕ್ಷ ಬಜಾರ, ಎದುರು ಬಸವಣ್ಣ ಮಂಟಪ, ಕೋದಂಡರಾಮ ದೇವಾಲಯ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪ, ಉಗ್ರ ನರಸಿಂಹ, ಬಡವಿಲಿಂಗ, ಶ್ರೀಕೃಷ್ಣ ಬಜಾರ, ರಾಜರ ರಹಸ್ಯ ಸಭಾಗೃಹ, ಮಹಾನವಮಿ ದಿಬ್ಬ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು. ವೀಕೆಂಡ್‌ನಲ್ಲಿ ಬೆಂಗಳೂರು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ.

ತಮ್ಮ ಹರಕೆ- ಕಾಣಿಕೆಗಳನ್ನು ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಭಾನುವಾರ ಮುಂಜಾನೆ ಮಹದೇಶ್ವರ ಸ್ವಾಮಿ ಮೂರ್ತಿಗೆ ಎಳನೀರಿನ ಅಭಿಷೇಕ, ಹಾಲು, ಪಂಚಾಮೃತ ಅಭಿಷೇಕ ಪೂಜೆ ನೆರವೇರಿತು. ನೈವೇದ್ಯ ಅರ್ಪಿಸಿದ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು.

ಇನ್ನು ಉಡುಪಿಯ ಮಲ್ಪೆ, ಮಂಗಳೂರಿನ ಪಣಂಬೂರು, ತಣ್ಣೀರುಭಾವಿಯಲ್ಲಿ ಹೆಚ್ಚಿನ ಪ್ರವಾಸಿಗಳು ಕಂಡು ಬರಲಿಲ್ಲ. ಕರಾವಳಿ ತೀರದಲ್ಲಿ ಮಳೆಯ ಮುನ್ಸೂಚನೆ ಇದ್ದ ಕಾರಣ ಪ್ರವಾಸಿಗರ ಪ್ರಮಾಣ ಸಾಧಾರಣವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌