ಜನ, ಸಮಾಜ ಕೇಂದ್ರಿತ ವೈದ್ಯಕೀಯ ಪದ್ಧತಿ ಅಗತ್ಯ: ಡಾ.ಯೋಗಾನಂದ ರೆಡ್ಡಿ

KannadaprabhaNewsNetwork |  
Published : Oct 21, 2024, 12:45 AM IST
ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಮತ್ತು ಮಂಗಳೂರು ಶಾಖೆ, ಐಎಂಎ ರಾಜ್ಯ ಕುಟುಂಬ ವೈದ್ಯರ ವಿಭಾಗ ಮಾರ್ಗದರ್ಶನದಲ್ಲಿ ಮಂಗಳೂರಿನ ಕುಟುಂಬ ವೈದ್ಯರ ಸಂಘದ ವಿಂಶತಿ ವರ್ಷದ ಆಚರಣೆ ಅಂಗವಾಗಿ ಐಎಂಎ ಸಭಾಂಗಣದಲ್ಲಿ ಕುಟುಂಬ ವೈದ್ಯರ (ಎಂಬಿಬಿಎಸ್‌) ರಾಜ್ಯ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರೋಗಿ ಕೇಂದ್ರಿತ ವೈದ್ಯಕೀಯ ಪದ್ಧತಿ ಅನುಸರಿಸುವುದಕ್ಕಿಂತ ಜನ, ಸಮಾಜ ಕೇಂದ್ರಿತ ವೈದ್ಯಕೀಯ ಪದ್ಧತಿ ಅನುಸರಿಸುವ ಅಗತ್ಯವಿದೆ ಎಂದು ಇಂಡಿಯನ್‌ ಮೆಡಿಕಲ್‌ ಕೌನ್ಸಿಲ್‌ (ಐಎಂಸಿ)ನ ರಾಜ್ಯ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಮತ್ತು ಮಂಗಳೂರು ಶಾಖೆ, ಐಎಂಎ ರಾಜ್ಯ ಕುಟುಂಬ ವೈದ್ಯರ ವಿಭಾಗ ಮಾರ್ಗದರ್ಶನದಲ್ಲಿ ಮಂಗಳೂರಿನ ಕುಟುಂಬ ವೈದ್ಯರ ಸಂಘದ ವಿಂಶತಿ ವರ್ಷದ ಆಚರಣೆ ಅಂಗವಾಗಿ ಭಾನುವಾರ ನಗರದ ಐಎಂಎ ಸಭಾಂಗಣದಲ್ಲಿ ಕುಟುಂಬ ವೈದ್ಯರ (ಎಂಬಿಬಿಎಸ್‌) ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ನಮ್ಮ ದೇಶದಲ್ಲಿ ಸಾವಿರ ಜನರಿಗೆ 0.7ರಷ್ಟು ವೈದ್ಯರು ಇದ್ದಾರೆ. ಈಗಲೂ ಹಳ್ಳಿ ಪ್ರದೇಶಗಳಲ್ಲಿ ಶೇ.60ರಷ್ಟು ವೈದ್ಯರಿದ್ದರೆ ಅದರಲ್ಲಿ ಶೇ.75ರಷ್ಟು ನಕಲಿ ವೈದ್ಯರಿದ್ದಾರೆ. ಇದರ ವಿರುದ್ಧ 70 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನಕಲಿ ವೈದ್ಯರ ಹಾವಳಿ ಕಡಿಮೆಯಾಗಿಲ್ಲ ಎಂದರು.

2014ರಲ್ಲಿ ರೂಪಿತವಾದ ನೀತಿಯಿಂದಾಗಿ ಆಯುಷ್‌ ವೈದ್ಯರು ಬದಲಿ ವೈದ್ಯರಾಗಿ ಮಾರ್ಪಾಡಾದರು. ಅದನ್ನು ಯಾರಿಂದಲೂ ತಡೆಯಲಾಗಲಿಲ್ಲ. ನೀತಿ ರೂಪಿಸುವಾಗ ವೈದ್ಯರ ಸಂಘಟನೆಯನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಇಂಥ ಪರಿಸ್ಥಿತಿ ಬಂದಿದೆ ಎಂದು ಯೋಗಾನಂದ ರೆಡ್ಡಿ ಹೇಳಿದರು.

ಹಿರಿಯ ವೈದ್ಯ ಡಾ.ಶಾಂತಾರಾಮ ಶೆಟ್ಟಿ ಮಾತನಾಡಿ, ನಮ್ಮ ವೈದ್ಯಕೀಯ ಪದ್ಧತಿಯನ್ನು ಸರಿಯಾಗಿ ನಡೆಸಿಕೊಂಡು ಬರಲಾಗಿಲ್ಲ. ಪ್ರಸ್ತುತ ದೇಶದಲ್ಲಿ 13.80 ಲಕ್ಷದಷ್ಟು ಅಲೋಪತಿ ವೈದ್ಯರಿದ್ದರೆ, ಅಷ್ಟೇ ಪ್ರಮಾಣದಲ್ಲಿ ಆಯುಷ್‌, ಯುನಾನಿ, ಹೋಮಿಯೋಪತಿ ಇತ್ಯಾದಿ ವೈದ್ಯರಿದ್ದಾರೆ. ದೇಶದ ಆರೋಗ್ಯ ಕ್ಷೇತ್ರದ ಬುನಾದಿಯಾಗಿರುವ ಕುಟುಂಬ ವೈದ್ಯ ಪದ್ಧತಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಪ್ರತಿ ಹಳ್ಳಿಯಲ್ಲೂ ಕುಟುಂಬ ವೈದ್ಯ ಪದ್ಧತಿ ಜಾರಿ ಮಾಡಿದರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸಾಧ್ಯವಾಗಲಿದೆ ಎಂದರು.

ಶತಮಾನಗಳ ಹಿಂದೆ ಭಾರತವು ಆರ್ಥಿಕ, ಸಾಂಸ್ಕೃತಿಕವಾಗಿ ನಂ.1 ಸ್ಥಾನದಲ್ಲಿತ್ತು. ಆದರೆ ಈಗ 154ನೇ ಸ್ಥಾನಕ್ಕೆ ಇಳಿದಿದೆ. ದೇಶವಾಸಿಗಳ ಆರೋಗ್ಯ ಕಾಪಾಡಿಕೊಳ್ಳಲು ಮೊದಲ ಆದ್ಯತೆ ನೀಡಿದರೆ ದೇಶ ಎಲ್ಲ ರೀತಿಯಿಂದಲೂ ಬಲಿಷ್ಠವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷ ಡಾ.ಶ್ರೀನಿವಾಸ್‌, ರಾಜ್ಯ ಕಾರ್ಯದರ್ಶಿ ಡಾ.ಕರುಣಾಕರ ಬಿ.ಪಿ., ಐಎಂಎ ಮಂಗಳೂರು ಅಧ್ಯಕ್ಷ ರಂಜನ್‌ ಬಿ.ಕೆ., ಕಾರ್ಯದರ್ಶಿ ಡಾ.ಅವಿನ್‌ ಆಳ್ವ, ಪ್ರಮುಖರಾದ ಡಾ. ಸದಾಶಿವ, ಡಾ.ಮನೀಶ್‌ ರಾವ್‌, ಡಾ.ಗೋಪಾಲಕೃಷ್ಣ ಸಂಕಬಿತ್ತಿಲು, ಡಾ.ಶೇಖರ ಪೂಜಾರಿ, ಡಾ.ನಾರಾಯಣ ಭಟ್‌ ಮತ್ತಿತರರು ಇದ್ದರು.

ಕುಟುಂಬ ವೈದ್ಯರ ಸಂಘದ ಮಂಗಳೂರು ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್‌ ಸ್ವಾಗತಿಸಿದರು. ವಿವಿಧ ಜಿಲ್ಲೆಗಳಿಂದ 200ಕ್ಕಿಂತಲೂ ಅಧಿಕ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ