ಜನೌಷಧಿ ಕೇಂದ್ರದಲ್ಲಿ ಔಷಧಿ ಕೊರತೆ: ರೋಗಿಗಳ ಪರದಾಟ

KannadaprabhaNewsNetwork |  
Published : Aug 23, 2026, 02:30 AM IST
ಮುಂಡಗೋಡ ಪಟ್ಟಣದ ಜನೌಷಧಿ ಕೇಂದ್ರದಲ್ಲೇ ಅಗತ್ಯ ಔಷಧಿಗಳು ಸಿಗದೇ ಸಾರ್ವಜನಿಕರು ಪರದಾಡುವಂತಾಗಿದೆ. | Kannada Prabha

ಸಾರಾಂಶ

ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾದ ಜನೌಷಧಿ ಕೇಂದ್ರದಲ್ಲೇ ಅಗತ್ಯ ಔಷಧಿಗಳು ಸಿಗದೇ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಯಾವಾಗ ಕೇಳಿದರೂ ಸ್ಟಾಕ್ ಇಲ್ಲ ಎಂಬ ಉತ್ತರ

ಮಹಿಳೆಯರ ಸ್ಯಾನಿಟರಿ ಪ್ಯಾಡ್‌ಗಳೂ ಸಿಗುತ್ತಿಲ್ಲ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾದ ಜನೌಷಧಿ ಕೇಂದ್ರದಲ್ಲೇ ಅಗತ್ಯ ಔಷಧಿಗಳು ಸಿಗದೇ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಜನೌಷಧಿ ಕೇಂದ್ರಕ್ಕೆ ಬರುವ ರೋಗಿಗಳು ತಮಗೆ ಬೇಕಿರುವ ಔಷಧಿಗಳನ್ನು ಕೇಳಿದಾಗ, ಔಷಧಿ ಖಾಲಿಯಾಗಿದೆ, ಇನ್ನೂ ಬಂದಿಲ್ಲ, ಸ್ಟಾಕ್ ಇಲ್ಲ ಎಂಬ ಉತ್ತರವೇ ಸಿಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರ ಪರಿಣಾಮ ಅನೇಕರು ಖಾಸಗಿ ಔಷಧ ಅಂಗಡಿಗಳಿಂದ ದುಬಾರಿ ಬೆಲೆಗೆ ಔಷಧಿಗಳನ್ನು ಖರೀದಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ವಿಶೇವಾಗಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ದೀರ್ಘಕಾಲದ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳು ಪದೇ ಪದೇ ಲಭ್ಯವಾಗುತ್ತಿಲ್ಲ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಡ ಹಾಗೂ ವೃದ್ಧ ರೋಗಿಗಳಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.

ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳ ಮೂಲಕ ಅಗ್ಗದ ದರದಲ್ಲಿ ಔಷಧಿ ನೀಡುವ ಯೋಜನೆ ಜಾರಿಗೊಳಿಸಿದ್ದರೂ, ಸಮರ್ಪಕ ಪ್ರಮಾಣದಲ್ಲಿ ಔಷಧಿ ಪೂರೈಕೆ ಆಗದಿರುವುದು ಯೋಜನೆಯ ಉದ್ದೇಶವನ್ನೇ ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಸ್ಯಾನಿಟರಿ ಪ್ಯಾಡ್ ಕೊರತೆ:

ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ಯೋಜನೆ ಇದ್ದರೂ, ಹಲವು ದಿನಗಳಿಂದ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಿಲ್ಲ. ಸಾಮಾನ್ಯವಾಗಿ ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಸಿಗುತ್ತಿದ್ದವು. ಹೀಗಾಗಿ ಮಹಿಳೆಯರು ಖಾಸಗಿ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಖರೀದಿಸುವುದು ಅನಿವಾರ್ಯವಾಗುತ್ತಿದೆ. ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಖಾಸಗಿ ಕಂಪನಿಯ ಔಷಧಿ ಮಾರಾಟ ಆಕ್ರೋಶ:

ಜನೌಷಧಿ ಕೇಂದ್ರಗಳಲ್ಲಿ ಯಾವುದೇ ಔಷಧಿ ಕೇಳಲು ಹೋದರೂ ಜನೌಷಧಿ ಕಂಪನಿ ಇಲ್ಲ, ಬೇರೆ ಕಂಪನಿ ಇದೆ ತೆಗೆದುಕೊಳ್ಳಿ ಎಂದು ಅಲ್ಲಿಯ ಸಿಬ್ಬಂದಿ ಹೇಳುತ್ತಾರೆ. ಇದರಿಂದ ಅದನ್ನೇ ಹೆಚ್ಚುವರಿ ಹಣ ನೀಡಿ ಖರೀದಿಸುವುದು ಅನಿವಾರ್ಯವಾಗಿದೆ. ಪಟ್ಟಣದಲ್ಲಿ ೨ ಜನೌಷಧಿ ಕೇಂದ್ರವಿದ್ದರೂ ಎರಡೂ ಕಡೆ ಇದೇ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಕೆಲವೆಡೆ ಜನೌಷಧಿ ಕೇಂದ್ರಗಳು ಇದ್ದೂ ಇಲ್ಲದಂತಾಗಿದೆ.

ಜನೌಷಧಿ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ನಿರಂತರವಾಗಿ ಲಭ್ಯವಾಗುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂದು ಅಗ್ಗದ ದರದಲ್ಲಿ ಉತ್ತಮ ಔಷಧಿ ಪೂರೈಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ತೆರೆಯಲಾಗಿದೆ. ಆದರೂ ಅತ್ಯಗತ್ಯ ಔಷಧಿಗಳು ಲಭಿಸದೆ ಸಾರ್ವಜನಿಕರು ಖಾಸಗಿ ಔಷಧಿ ಅಂಗಡಿಗೆ ಹೋಗಿ ಹೆಚ್ಚುವರಿ ಹಣ ನೀಡಿ ಔಷಧಿ ಖರೀದಿಸುವುದು ತಪ್ಪಿಲ್ಲ ಎನ್ನುತ್ತಾರೆ ಸಾಮಾಜಿಕ ಧುರೀಣ ವಾದಿರಾಜ ರಾವ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ