ಅಂಕೋಲಾ: ಮನಸ್ಸಿನ ನಿಯಂತ್ರಣ ತಪ್ಪಿ ಮಾನವ ಇಂದಿನ ದಿನಗಳಲ್ಲಿ ಜಂಜಾಟದ ಬದುಕಿಗೆ ಒಳಪಟ್ಟಿದ್ದಾನೆ. ಇದರಿಂದ ಮುಕ್ತರಾಗಲು ಧ್ಯಾನ ಅತ್ಯಗತ್ಯ ಎಂದು ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್ ತಿಳಿಸಿದರು.
ಕಲಾಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಧ್ಯಾನ ಸಮೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಎದುರಾಗುವ ಯಾವುದೇ ಟೀಕೆಗಳಿಗೆ, ಟಿಪ್ಪಣಿಗಳಿಗೆ ಉತ್ತರಿಸದೆ, ಯಾರಿಗೂ ಕೆಟ್ಟದ್ದನ್ನು ಬಯಸದೇ ನಮ್ಮ ನಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಇರುವುದರಲ್ಲೇ ಸಂತೋಷ ಪಡುವುದು ಜೀವನದ ಯಶಸ್ಸಿನ ಗುಟ್ಟು. ಮುಂದಿನ ದಿನಗಳಲ್ಲಿ ಧ್ಯಾನ ಸಮೃದ್ಧಿಯಂತಹ ಕಾರ್ಯಕ್ರಮಗಳು ಜಿಲ್ಲಾದ್ಯಂತ ಹೆಚ್ಚಿಸಿ ಸಕಲರ ಆರೋಗ್ಯ ಭಾಗ್ಯ ಕರುಣಿಸುವಂತಾಗಲಿ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮರ್ಷಿ ಪ್ರೇಮನಾಥ ಜಿ. ಅವರು, ಯುವಕರಲ್ಲಿ ಧ್ಯಾನ ಮಾಡುವವರು ವಯೋಸಹಜರು ಎಂಬ ಭಾವನೆಯಿದೆ. ಅದನ್ನು ಬದಲಿಸಿ ಪ್ರತಿಯೊಬ್ಬರೂ ಧ್ಯಾನ, ಯೋಗದಿಂದ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ನಮ್ಮ ದುಃಖಕ್ಕೆ ಕಾರಣ ನಮ್ಮ ಮನಸ್ಸು ಹೊರತು ಮತ್ತೇನೂ ಅಲ್ಲ. ಯಾರು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾನೋ ಅವನೇ ಯೋಗಿ ಎಂದರು.
ದಾವಣಗೆರೆ ಸೀನಿಯರ್ ಪಿರಮಿಡ್ ಮಾಸ್ಟರ್ ಮಾರುತಿ ರಾಮ್ ಧ್ಯಾನದಿಂದ ಸರ್ವ ರೋಗ, ಸರ್ವ ಕಷ್ಟಗಳು ನಿವಾರಣೆಯಾಗುತ್ತದೆ. ಆಂಕೋಲೆಯಲ್ಲಿ ಧ್ಯಾನದ ಬಗ್ಗೆ ಅರಿವು ಮೂಡಿಸುತ್ತಿರುವ ಸಂಘಟಕ ಪ್ರಶಾಂತ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಅಧ್ಯಕ್ಷ ಡಾ. ವಿಜಯದೀಪ್, ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಹೆಗಡೆ, ಪುರಸಭಾ ಮಾಜಿ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮರ್ಷಿ ಪ್ರೇಮನಾಥ ಜಿ., ಮಾರುತಿ ರಾಮ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎ. ಕರ್ಕಿಕರ್ ಅವರನ್ನು ಸನ್ಮಾನಿಸಲಾಯಿತು. ದರ್ಶಿನಿ ಶೆಟ್ಟಿ ಪ್ರಾರ್ಥಿಸಿದರು. ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಧಾ ಶೆಟ್ಟಿ ನಿರೂಪಿಸಿದರು. ವಿ.ಕೆ. ನಾಯರ್ ವಂದಿಸಿದರು.