ಸೃಜನಶೀಲತೆಯ ಮೂಲಕ ಸವಾಲು ಎದುರಿಸಿ

KannadaprabhaNewsNetwork |  
Published : Sep 13, 2025, 02:04 AM IST
ಪೊಟೋ: 12ಎಸ್‌ಎಂಜಿಕೆಪಿ01 ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ 'ಎನ್.ಸಿ.ಪಿ ಕಲಾಸಂಗಮ-2025' ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎಂ.ಫಾರ್ಮ್ ಫಾರ್ಮಾಸ್ಯುಟಿಕ್ಸ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಬಂಗಾರದ ಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಅವರನ್ನು ಅಭಿನಂದಿಸಲಾಯಿತು.  | Kannada Prabha

ಸಾರಾಂಶ

ಔಷಧ ವಿಜ್ಞಾನಕ್ಕೆ ಸಂಗೀತ, ಸಾಹಿತ್ಯ ಸೃಜನಶೀಲತೆಯ ಅವಿನಾಭಾವ ಸಂಬಂಧವಿದ್ದು, ಕ್ರಿಯಾಶೀಲತೆಯ ಮೂಲಕ ಬದುಕಿನ ಸಮಸ್ಯೆಗಳನ್ನು ಎದುರಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.

ಶಿವಮೊಗ್ಗ: ಔಷಧ ವಿಜ್ಞಾನಕ್ಕೆ ಸಂಗೀತ, ಸಾಹಿತ್ಯ ಸೃಜನಶೀಲತೆಯ ಅವಿನಾಭಾವ ಸಂಬಂಧವಿದ್ದು, ಕ್ರಿಯಾಶೀಲತೆಯ ಮೂಲಕ ಬದುಕಿನ ಸಮಸ್ಯೆಗಳನ್ನು ಎದುರಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ''''''''ಎನ್.ಸಿ.ಪಿ ಕಲಾಸಂಗಮ-2025'''''''' ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಗೀತದಲ್ಲಿ ಔಷಧೀಯ ಗುಣಗಳ ದಿವ್ಯ ಶಕ್ತಿಯಿದೆ. ಪ್ರಾಣಿ ಪಕ್ಷಿಗಳಿಗೂ ದಿವ್ಯ ಔಷಧವಾಗಿ ಮಾನಸಿಕ ನೆಮ್ಮದಿ ನೀಡುತ್ತದೆ. ಮನುಷ್ಯನಿಗೆ ಪರಿಪೂರ್ಣ ನೆಮ್ಮದಿ, ಶಾಂತಿ ಇದ್ದಾಗ ಮಾತ್ರ ವ್ಯಕ್ತಿತ್ವ ಪೂರ್ಣನಾಗಿ ಹೊರಬರಲು ಸಾಧ್ಯ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಕ್ರಿಯಾಶೀಲ ಬದುಕನ್ನು ಕಟ್ಟಿಕೊಳ್ಳಿ. ಆಧುನಿಕ‌ ಜಾಲತಾಣ ಎಂಬ ಸಾಂಕ್ರಾಮಿಕ ರೋಗ ನಿಮ್ಮನ್ನು ಬಾಧಿಸದಿರಲಿ ಎಂದರು.

ಔಷಧ ವಿಭಾಗದಲ್ಲಿನ ವ್ಯಾಸಂಗವು, ಖಚಿತ ಉದ್ಯೋಗ ಭರವಸೆಯನ್ನು ನೀಡುತ್ತದೆ. ಮನುಷ್ಯನ ಮೇಲೆ ಔಷಧಗಳು ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಅಭ್ಯಾಸಿಸಿದ್ದಿರಿ. ಇದರೊಂದಿಗೆ ಜವಾಬ್ದಾರಿಯುತವಾಗಿ ರೋಗಿಯ ಆರೈಕೆ ಮತ್ತು ಔಷಧಗಳ ನಿರ್ವಹಣೆ ನಡೆಸಿ ಎಂದು ಫಾರ್ಮಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಯುವ ಜನತೆ ತಾಳ್ಮೆಯ ಕಡೆಗೆ ಹೆಚ್ಚು ಗೌರವ ನೀಡಿ. ಓದು ಬರಹ ನಿಜವಾದ ವಿದ್ಯೆಯಲ್ಲ, ವಿವೇಕ ವಿನಯ ನಿಜವಾದ ವಿದ್ಯಾಭ್ಯಾಸ. ನಮ್ಮ ವ್ಯಕ್ತಿತ್ವ ಸುಂದರವಾಗಿದ್ದರೆ ಮಾತ್ರ ಮನಸ್ಸಿನಲ್ಲಿ ಉಳಿಯಲು ಸಾಧ್ಯ‌. ನಮ್ಮಲ್ಲಿ ಮೂಡುವ ಅನುಮಾನಗಳು ತಪ್ಪಾಗಬಹುದು ಅದರೇ ಅನುಭವಗಳು ಎಂದಿಗೂ ತಪ್ಪಾಗಲಾರದು. ಹೆತ್ತವರ ಹಿರಿತನಕ್ಕೆ ಗೌರವ ನೀಡಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಬೆಂಗಳೂರಿನ ಹರ್ಬ್ ಅರ್ಟಿಜನ್ ಕಂಪನಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ಗುರುರಾಜ್ ಮಾತನಾಡಿ, ಗುರಿಯ ಸ್ಪಷ್ಟತೆಯನ್ನು ಹೊಂದಿ. ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯತೆಗಳು ಸಾಧನೆಯ ಪರಿಪೂರ್ಣ ಹಂತಕ್ಕೆ ತಲುಪಲು ಸಾಧ್ಯ ಮಾಡಿಕೊಡಲಿದೆ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎಂ.ಫಾರ್ಮ್ ಫಾರ್ಮಾಸ್ಯುಟಿಕ್ಸ್ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಬಂಗಾರದ ಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸಂಜನಾ, ಒಂಬತ್ತನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ ಜುವೈರಿಯಾ ಖಾನಂ, ಫಾರ್ಮಾಕಾಗ್ನಸಿ ವಿಭಾಗದಲ್ಲಿ ಏಳನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ ಲಿಖಿತ.ಕೆ ಸೇರಿದಂತೆ ಬಿ.ಫಾರ್ಮ್ ವಿವಿಧ ಕೋರ್ಸ್‌ಗಳ ರ್‍ಯಾಂಕ್‌ ವಿಜೇತ ಮತ್ತು ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!