ಕನ್ನಡಪ್ರಭವಾರ್ತೆ ಗುಳೇದಗುಡ್ಡ
ನೇಕಾರರನ್ನುದ್ದೇಶಿಸಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪರ ಭಾಷಣ ಮಾಡಲು ಬಂದಿದ್ದ ಮಾಜಿ ಸಚಿವೆ ಉಮಾಶ್ರೀ ಹಾಗೂ ಕಾಂಗ್ರೆಸ್ ಪಕ್ಷದ ನೇಕಾರ ಮುಖಂಡರು 15 ನಿಮಿಷ ಕಾದರೂ ಕಲ್ಯಾಣ ಮಂಟಪದಲ್ಲಿ ಕೇವಲ 10-15 ಜನ ಮಾತ್ರ ಸೇರಿದ್ದರಿಂದ ನಿರಾಶರಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸಭೆ ಮೊಟಕುಗೊಳಿಸಿ ಹೊರನಡೆದರು. ಬಳಿಕ ಪಟ್ಟಣದ ನೇಕಾರ ಸಮುದಾಯದ ಗುರುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಶೀರ್ವಾದ ಪಡೆದರು.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿನ ನೇಕಾರ ಸಮುದಾಯದ ಬಹಳಷ್ಟು ಜನ ಬಾಗಲಕೋಟೆಗೆ ಹೋಗಿದ್ದರಿಂದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಸಭೆ ನೇಕಾರ ಬಾಂಧವರಿಲ್ಲದೇ ಮೊಟಕು ಆಗಿದೆ ಎಂದು ಕೆಲವರು ಹೇಳಿದರೆ, ಇಲ್ಲಿನ ನೇಕಾರರಿಗೆ ಸೋಮವಾರ ಸಭೆ ಇರುವ ಬಗ್ಗೆ ನೇಕಾರ ಮುಖಂಡರು ಮಾಹಿತಿ ನೀಡಿರಲಿಲ್ಲವೆಂದು ಇನ್ನೂ ಕೆಲವರು ತಿಳಿಸಿದರು.