ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾನಗರ ಪಾಲಿಕೆಯ 477 ಪೌರ ಕಾರ್ಮಿಕರ ಸೇವೆ ಕಾಯಂ ಕುರಿತು ಡಿ.27ರಂದು ಜರುಗಲಿರುವ ಮಹಾನಗರ ಪಾಲಿಕೆಯ ವಿಶೇಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಹಾಪೌರ ವಿಶಾಲ್ ದರ್ಗಿ ಭರವಸೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪೌರ ಕಾರ್ಮಿಕರು ಆರಂಭಿಸಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರೊಂದಿಗೆ ಆಗಮಿಸಿ ಮಾತುಕತೆ ನಡೆಸಿದ ಅವರು, ಹೋರಾಟಗಾರರಿಂದ ಬೇಡಿಕೆಗಳ ಮನವಿ ಸ್ವೀಕರಿಸಿ, ಸಮಸ್ಯೆಗಳ ಇತ್ಯರ್ಥಕ್ಕಾಗಿ ವಿಶೇಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
477 ದಿನಗೂಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲವೇ ಅವರ ಸೇವೆಯನ್ನು ಕಾಯಂಗೊಳಿಸುವ ಮೂಲಕ ನೇರ ಪಾವತಿ ಆಯ್ಕೆಗೊಳಿಸಬೇಕು ಎಂದು ಆಗ್ರಹಿಸಿದರು.ಮಹಾನಗರ ಪಾಲಿಕೆಯಲ್ಲಿ ಕಳೆದ 8 ವರ್ಷಗಳಿಂದ ಭ್ರಷ್ಟ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಒಂದು ವಾರದೊಳಗೆ ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹೋರಾಟ ನಿರತ ಮುಖಂಡರು ಮಾತನಾಡಿ, ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರದ ನಿಯಮಗಳು ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ವಹಿತಾಸಕ್ತಿ ಕಾಪಾಡಲು ಪೌರ ಕಾರ್ಮಿಕರಲ್ಲದವರನ್ನು ಆಯ್ಕೆಗೊಳಿಸಿ ತಾತ್ಕಾಲಿಕ ಕಾಯಂ ಆಯ್ಕೆ ಪಟ್ಟಿಯಲ್ಲಿ ಅಂತಿಮಗೊಳಿಸಿದ್ದಾರೆ. ಅರ್ಹ ದಿನಗೂಲಿ ಕಾರ್ಮಿಕರು ಕಾಲ ಮಿತಿಯೊಳಗೆ ಜಿಲ್ಲಾಧಿಕಾರಿಗಳಿಗೆ ತಾತ್ಕಾಲಿಕ ನೇಮಕಾತಿ ಆಯ್ಕೆ ಪಟ್ಟಿಯ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದರು.ಸದರಿ ಆಕ್ಷೇಪಣೆಗಳ ಕುರಿತು ಯಾವುದೇ ಸೂಕ್ತ ಕ್ರಮ ಕೈಗೊಳ್ಳುವುದರ ವಿರುದ್ಧ ಅಂದಿನ ಪಾಲಿಕೆಯ ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಮತ್ತು ಪಾಲಿಕೆಯ ಪರಿಸರ ಅಭಿಯಂತರ ಮುನಾಫ್ ಪಟೇಲ್ ಹಾಗೂ ಇತರ ಮೂವರ ವಿರುದ್ಧ ಕ್ರಮಕ್ಕಾಗಿ ದೂರು ಸಲ್ಲಿಸಲಾಗಿತ್ತು.
ಪರಿಣಾಮ ವಿಚಾರಣೆ ಮಾಡಿ ಜಿಲ್ಲಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಪೌರ ಕಾರ್ಮಿಕರ ಕಾಯಂ ಮತ್ತು ನೇರ ನೇಮಕಾತಿ, ನೇರ ಪಾವತಿ ಪ್ರಕ್ರಿಯೆಯಲ್ಲಿ ಗಂಭೀರ ಕರ್ತವ್ಯ ಲೋಪ ಮಾಡಿರುವುದನ್ನು ಪರಿಗಣಿಸಿ ಮೂರು ವರ್ಷದೊಳಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಹಾಗೂ ಯಾವ ಹುದ್ದೆಯ ಆಯ್ಕೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದಾಗ್ಯೂ, ತಕ್ಕಂತಹ ಅಭ್ಯರ್ಥಿಗಳನ್ನು ಆಯ್ಕೆಗೊಳಿಸದೇ ಪೌರ ಕಾರ್ಮಿಕರಲ್ಲದವರಿಗೆ ಮತ್ತು ಉದ್ದೇಶಪೂರ್ವಕವಾಗಿ 35 ತಿಂಗಳು ನಿರಂತರ ದಿನಗೂಲಿ ನೌಕರರೆಂದು ನ್ಯಾಯಾಲಯದ ಆದೇಶದೊಂದಿಗೆ ದುಡಿಯುತ್ತಿರುವ ಅರ್ಹ ದಿನಗೂಲಿ ಪೌರ ಕಾರ್ಮಿಕರನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟಿದ್ದು ಕರ್ತವ್ಯಲೋಪ ಎಸಗಲಾಗಿದೆ ಎಂದು ಅವರು ಆರೋಪಿಸಿದರು.ಸದರಿ ಆಯ್ಕೆ ಪಟ್ಟಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೊಂದಿರುವ, ಮರಣ ಹೊಂದಿದವರ ವ್ಯಕ್ತಿಗಳ ಹೆಸರುಗಳನ್ನು ಸೇರಿಸಲಾಗಿದೆ. ಅಂದಿನ ಜಿಲ್ಲಾಧಿಕಾರಿ ಹಾಗೂ ಸಕ್ರಮ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಜ್ಯೋತಿಷ್ಣಾ, ಪಾಲಿಕೆಯ ಪರಿಸರ ಅಭಿಯಂತರ ಮುನಾಫ್ ಪಟೇಲ್, ಇತರ ಮೂವರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದಾಗ್ಯೂ, ತಪ್ಪಿತಸ್ಥರ ವಿರುದ್ಧ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಇದರಿಂದ ಬೇಸರಗೊಂಡು ನ್ಯಾಯಾಲಯದ ಮೊರೆ ಹೋದಾಗ ಪೌರ ಕಾರ್ಮಿಕರ ನೇರ ನೇಮಕಾತಿ ಕಾಯಂಮಾತಿಯ ಆಯ್ಕೆಯ ತಾತ್ಕಾಲಿಕ ಆಯ್ಕೆ ಪಟ್ಟಿ ವಿರುದ್ಧ ತಡೆಯಾಜ್ಞೆ ನೀಡಲಾಗಿದೆ. ಆದ್ದರಿಂದ ಕೂಡಲೇ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿ, ದಿನಗೂಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ, ಕಾಯಂ, ನೇರ ಪಾವತಿ ಆಯ್ಕೆಗೊಳಿಸುವಂತೆ ಒತ್ತಾಯಿಸಿದ ಅವರು, ಭ್ರಷ್ಟ ಅಧಿಕಾರಿಗಳಿಗೆ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಭಾರತಿಬಾಯಿ ಹತ್ತರಕಿ, ಶಿವಶರಣಪ್ಪ ಜಿ. ಹೊಸಮನಿ, ಸುನೀಲ್ ಮಾನ್ಪಡೆ, ಸೂರ್ಯಕಾಂತ್ ನಿಂಬಾಳಕರ್, ಸೋಮಶೇಖರ್ ಭಂಗರಗಿ, ದಶರಥ್ ಎಂ. ಕಲಗುರ್ತಿ ಮುಂತಾದವರು ಉಪಸ್ಥಿತರಿದ್ದರು.