ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ನಮ್ಮ ಸಮಾಜವು ದೊಡ್ಡ ಸಂಘಟನೆಯಾಗಿದೆ. ಇತ್ತೀಚೆಗೆ ಕೆಲವು ಗೊಂದಲಗಳು ಉಂಟಾಗಿದ್ದು ಅದನ್ನು ಪರಿಹರಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದರು.
ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂಬ ಹೋರಾಟದ ಕಾರಣದಿಂದ ಲಿಂಗಾಯತ ಪಂಚಮಸಾಲಿ ಸಮಾಜ, ಜಗತ್ತಿನಾದ್ಯಂತ ಒಗ್ಗಟ್ಟಾಗಿದೆ. ನಮ್ಮ ಉದ್ದೇಶ ಸಮಾಜಕ್ಕೆ ನ್ಯಾಯ ಕೊಡಿಸುವಂತಹದ್ದಾಗಿದೆ. ಕೂಡಲಸಂಗಮ ಬಯಲು ಜಾಗದಲ್ಲಿ ಪೀಠ ಆರಂಭವಾಯಿತು. ಭಕ್ತರ ಹೃದಯ ಪೀಠವೇ ನಮ್ಮ ಸಿಂಹಾಸನ. ಸಂಘಟನೆ ಮಾಡುವ ಸಂದರ್ಭದಲ್ಲಿ, ಕೆಲವು ಶಿಷ್ಯರು ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರೆಲ್ಲ ನಮ್ಮವರೇ, ನಾನು ಅವರ ವಿರೋಧ ಮಾಡಲ್ಲ. ಅವರ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.ಕೆಲವು ಅಜ್ಞಾನ ಹಾಗೂ ಆಸೆ ಆಮಿಷಗಳಿಗೆ ಒಳಪಟ್ಟು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ. ಸಮಾಜದ ವ್ಯಕ್ತಿ ಯಾರೇ ಆಗಿರಲಿ ಅವರ ಪರ ಧ್ವನಿ ಎತ್ತುತ್ತೇನೆ. ಯಾರನ್ನೋ ಮಂತ್ರಿ ಮಾಡಲು, ಶಾಸಕರನ್ನು ಮಾಡಲು ಶ್ರೀ ಪೀಠಗಳನ್ನು ಕಟ್ಟಿದ್ದಲ್ಲ. ನಾನು ಯಾವುದೇ ಭೌತಿಕತೆಗೆ ಒಳಗಾಗಿಲ್ಲ. ಮನಸುಗಳನ್ನು ಕಟ್ಟುವಂತಹ ಕೆಲಸ ಮಾಡಿರುವೆ. ಜನರನ್ನು ಕಟ್ಟುವಂತಹ ಕೆಲಸ ಮಾಡಿದ್ದೇನೆ. ಜೀವದ ಉಸಿರಿರೋವರೆಗೂ ದುಡಿಯುತ್ತೇನೆ. ನಾನು ಸಮಾಜಕ್ಕೆ ಅರ್ಪಣೆ ಆಗಿದ್ದೇನೆ ಎಂದರು.
ಮಠದ ಸ್ವಾಮೀಜಿ ಬದಲಾವಣೆ ಮಾಡಬೇಕೆನ್ನುವ ಶಾಸಕ ಕಾಶಪ್ಪನರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ನನ್ನ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯಾರು ಟೀಕೆ ಮಾಡಿದ್ದಾರೆ ಅವರೆಲ್ಲರೂ ನಮ್ಮವರೇ. ಅವರಿಗೆ ದೇವರು ಸದ್ಬುದ್ಧಿ ಕೊಡಲಿ. ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಜದ ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಶ್ರೀ ಪೀಠದ ಬಗ್ಗೆ ಗೌರವ ಅಭಿಮಾನ ಹೊಂದಿರುವ ಎಲ್ಲರೂ ಏ.20ರ ಸಭೆಗೆ ಬರುತ್ತಾರೆ ಎನ್ನುವ ಮೂಲಕ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಬಗ್ಗೆ ಪರೋಕ್ಷ ಬೇಸರ ವ್ಯಕ್ತಪಡಿಸಿದರು.
ಅಜ್ಞಾನಕ್ಕೆ ಒಳಪಟ್ಟಂತ ಹೇಳಿಕೆಗಳಿಗೆ ಸ್ಪಂದಿಸಲ್ಲ. ಯಾರು ಎಷ್ಟು ದೊಡ್ಡವರಾಗಿದ್ದಾರೋ, ಅವರ ಮನಸ್ಸಿಗೆ ಪ್ರಶ್ನೆ ಮಾಡಿಕೊಂಡರೆ ಸಾಕು. ಇವೆಲ್ಲವನ್ನು ಸಹಿಸಿಕೊಂಡು ನಾನು ಬೀದಿಗೆ ಬಂದು ಪಾದಯಾತ್ರೆ ಮಾಡಿದೆ. ನನಗೆ ಅರಮನೆಯಂತಹ ಮಠ ಕಟ್ಟುವ ಉದ್ದೇಶ ನನಗಿಲ್ಲ. ಭಕ್ತರು ಕೊಡುವ ಕೈತುತ್ತು ನನಗೆ ಮಹಾ ಪ್ರಸಾದ ಎಂದರು.
ಭಕ್ತರು ಸೈ ಅಂದ್ರೆ ಹೊಸಪೀಠದ ಸಾರಥ್ಯಕ್ಕೂ ಸೈ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳುವ ಮೂಲಕ ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್‌ಗೆ ಸವಾಲು ಹಾಕಿದ್ದಾರೆ.