ಬಿಜೆಪಿ ಟಿಕೆಟ್‌ ಅಸಮಾಧಾನ: ಬಂಡಾಯ ಶಮನಕ್ಕೆ ಪ್ರಯತ್ನ

KannadaprabhaNewsNetwork |  
Published : Mar 29, 2024, 12:49 AM IST
28ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ಬಿ.ವಿ.ನಾಯಕಗೆ ಟಿಕೆಟ್‌ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಬಿ.ವಿ.ನಾಯಕರ ನಿವಾಸದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್‌ ಹಾಗೂ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಗೇರಾ ಅವರು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಘೋಷಣೆ ಅಸಮಧಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮತ್ತೊಮ್ಮೆ ಟಿಕೆಟ್‌ ನೀಡಿದ್ದಕ್ಕೆ ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲಿಯೇ ಕ್ಷೇತ್ರದ ಉಸ್ತುವಾರಿ, ಪ್ರಭಾರಿಗಳು ಅಖಾಡಕ್ಕೆ ಇಳಿದು ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ದಾರೆ.

ಕುಷ್ಟಗಿ ಶಾಸಕ, ಬಿಜೆಪಿ ಮುಖ್ಯ ಸಚೇತಕ, ಲೋಕಸಭಾ ಉಸ್ತುವಾರಿ ದೊಡ್ಡನಗೌಡ ಪಾಟೀಲ್‌ ಹಾಗೂ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಗೇರಾ ಅವರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿರುವ ಮಾಜಿ ಸಂಸದ ಬಿ.ವಿ.ನಾಯಕರ ನಿವಾಸಕ್ಕೆ ತೆರಳಿ ಟಿಕೆಟ್‌ ಕೈತಪ್ಪಿ ಅಸಮಾಧಾನಗೊಂಡ ಬಿ.ವಿ.ನಾಯಕ ಮತ್ತು ಅವರ ಬೆಂಬಲಿಗರೊಂದಿಗೆ ಗುರುವಾರ ಸಮಾಲೋಚನೆ ನಡೆಸಿದರು. ನಂತರ ರಾಯಚೂರಿಗೆ ಆಗಮಿಸಿದ ಉಸ್ತುವಾರಿ, ಪ್ರಭಾರಿಗಳು ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್‌ ಅವರ ಮನೆಗೆ ತೆರಳಿ ವಿಚಾರಿಸಿದರು.

ಬಿ.ವಿ.ನಾಯಕ ಅವರಿಗೆ ಟಿಕೆಟ್‌ ಕೈ ತಪ್ಪಿರುವ ವಿಚಾರವಾಗಿ ಅವರು ಮತ್ತು ಅವರ ಬೆಂಬಲಿಗರು ಉಸ್ತುವಾರಿ, ಪ್ರಭಾರಿಗಳ ಮುಂದೆ ಆಕ್ರೋಶ ಹೊರಹಾಕಿದರು. ಕೊನೆ ಕ್ಷಣದಲ್ಲಿ ಟಿಕೆಟ್‌ ತಪ್ಪಿದೆ. ಹಿಂದೆ ನಡೆಸಿದ ಸಮೀಕ್ಷೆಗಳಲ್ಲಿ ಹಾಲಿ ಸಂಸದರ ವಿರುದ್ಧ ನಕರಾತ್ಮಕ ಸ್ಪಂದನೆ ಲಭಿಸಿದೆ. ಇಡೀ ಕ್ಷೇತ್ರದಲ್ಲಿ ಸಾಮಾನ್ಯ ಜನರನ್ನು ಕೇಳಿದರು ಬಿ.ವಿ.ನಾಯಕ ಅವರ ಹೆಸರೇ ಹೇಳುತ್ತಾರೆ. ಆದರೆ ಅಂತವರಿಗೆ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಂಡಾಯದ ಎಚ್ಚರಿಕೆ: ಇನ್ನು ಕಾಲ ಮಿಂಚಿಲ್ಲ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷ ಮನ್ನಣೆ ನೀಡಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ಕೊಡಬೇಕು. ಆ ನಿಟ್ಟಿನಲ್ಲಿ ಪಕ್ಷದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಬಂಡಾಯದ ಅಭ್ಯರ್ಥಿಯಾಗಿ ಸ್ಪರ್ಧಿಸಲಾಗುವುದು. ಒಂದು ಲಕ್ಷ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವರಿಷ್ಠರಿಗೆ ವರದಿ: ಬಿ.ವಿ.ನಾಯಕ ಮತ್ತು ಬೆಂಬಲಿಗರ ಅಭಿಪ್ರಾಯಗಳನ್ನು ಕೇಳಿದ ಉಸ್ತುವಾರಿ ದೊಡ್ಡನಗೌಡ ಪಾಟೀಲ್‌ ಅವರು ಯಾವ ರೀತಿಯಾಗಿ ಟಿಕೆಟ್ ಕೈತಪ್ಪಿದೆ, ಹಾಲಿ ಸಂಸದರಿಗೆ ಯಾಕೆ ನೀಡಿದ್ದಾರೆ ಎನ್ನುವುದರ ಕುರಿತು ನಾವು ಮಾತನಾಡುವುದಿಲ್ಲ. ಆದರೆ ಇಲ್ಲಿ ನಡೆದಂತಹ ಚರ್ಚಾ ಸಂಗತಿಗಳ ಸಮಗ್ರ ವರದಿಯನ್ನು ಪಕ್ಷದ ವರಿಷ್ಠರಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಲಾಗುವುದು. ಮುಂದೆ ಪಕ್ಷ ಯಾವ ನಿರ್ಧಾರಕ್ಕೆ ಬರುತ್ತದೆ ಎನ್ನುವುದು ಅವರಿಗೆ ಬಿಟ್ಟ ಸಂಗತಿಯಾಗಿದೆ ಎಂದು ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ, ಟಿಕೆಟ್‌ ಆಕಾಂಕ್ಷಿ, ಬಿ.ವಿ.ನಾಯಕ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರದ ಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಗೇರಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ, ಮುಖಂಡರು, ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!