ಧಾರವಾಡ: ವರ್ಗಕೋಣೆಯಲ್ಲಿ ಕಲಿಕೆಯ ಸಾಮರ್ಥ್ಯ ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ಬೋಧಿಸಬೇಕು ಎಂದು ಹುಬ್ಬಳ್ಳಿಯ ಕಿಮ್ಸ್ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ. ಮಹೇಶ ದೇಸಾಯಿ ಹೇಳಿದರು.

ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾದ ಕಲಿಕೆಯ ಅಸಮರ್ಥತೆಗಳ ವಿಷಯದ ಕಾರ್ಯಾಗಾರದಲ್ಲಿ ಮಾತನಾಡಿದರು.ಕಲಿಕಾ ಅಸಮರ್ಥತೆಗಳಿಗೆ ಸಂಬಂಧಿಸಿದಂತೆ ಓದು, ಬರಹ, ಗಣಿತ ಮತ್ತು ಭಾಷಾ ಕಲಿಕೆಯಲ್ಲಿ ಮಕ್ಕಳು ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಮೂಲಕ ಮಕ್ಕಳ ಕಲಿಕಾ ವೃದ್ಧಿಗೆ ಶಿಕ್ಷಕರು ಸಿದ್ಧರಾಗಬೇಕು ಎಂದರು.

ಶಾಲೆಗಳಲ್ಲಿ ಕಲಿಕಾ ಅಸಮರ್ಥತೆ ಎದುರಿಸುತ್ತಿರುವ ಮಕ್ಕಳಿಗೆ ಒದಗಿಸಬೇಕಾದ ಆಂತರಿಕ ಬೆಂಬಲ, ಬಲವರ್ಧನೆ ಮತ್ತು ಪ್ರಾಯೋಗಿಕ ಸಹಾಯದ ಕುರಿತು ಮಾಹಿತಿ ನೀಡಿದರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಹಾನುಭೂತಿ ಹಾಗೂ ಧೈರ್ಯ ತುಂಬುವ ವಾತಾವರಣ ನಿರ್ಮಾಣವಾಗಬೇಕು. ಮಕ್ಕಳು ಮೂಲತಃ ಕುತೂಹಲಿಗಳು. ಅವರಿಗೆ ಪ್ರೋತ್ಸಾಹದಾಯಕ ಪರಿಸರ ಮತ್ತು ಸಮಯ ನೀಡಿದರೆ ಆಸಕ್ತಿ ತಾನಾಗಿಯೇ ಬೆಳೆಯುತ್ತದೆ. ಇ-ಗ್ಯಾಜೆಟ್‌ಗಳ ಬಳಕೆಯನ್ನು ಸಮಯೋಚಿತವಾಗಿ ನಿರ್ಬಂಧಿಸುವುದು ಅವಶ್ಯಕ. ಎಡಿಎಚ್ ಇದು ಒಂದು ನ್ಯೂರೋ ವಿಕಾಸಾತ್ಮಕ ಸ್ಥಿತಿಯಾಗಿದ್ದು, ಇದರ ಪ್ರಮುಖ ಲಕ್ಷಣಗಳೆಂದರೆ ಗಮನ ಕೇಂದ್ರೀಕರಿಸಲು ಕಷ್ಟ, ಅತಿಯಾದ ಚಂಚಲತೆ, ಬೇಗ ಬೇಸರವಾಗುವುದು ಮತ್ತು ಯೋಚಿಸದೆ ವರ್ತಿಸುವುದು. ಇದಕ್ಕೆ ಪರಿಹಾರಗಳೆಂದರೆ ಸರಿಯಾದ ಔಷಧೋಪಚಾರ, ಸಮಯ ನಿರ್ವಹಣೆ ಮತ್ತು ಪಾಲಕರಿಗೆ ನೀಡುವ ತರಬೇತಿಯಿಂದ ಇದನ್ನು ನಿಯಂತ್ರಿಸಬಹುದು ಎಂದರು.

ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಲು ಯೋಗ, ಧ್ಯಾನ, ಪೌಷ್ಟಿಕ ಆಹಾರ ಮತ್ತು ಉತ್ತಮ ಜೀವನಶೈಲಿ ಅಗತ್ಯ. ಮಕ್ಕಳನ್ನು ಹೋಲಿಕೆ ಮಾಡುವುದನ್ನು ಬಿಟ್ಟು, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂದರು.


ಡಯಟ್ ಪ್ರಾಚಾರ್ಯ ಬಸವರಾಜ ನಾಲವತವಾಡ ಮಾತನಾಡಿದರು. ಡಾ. ನಿಹಾರಿಕಾ ''''ಒತ್ತಡ ನಿರ್ವಹಣೆ'''' ಮತ್ತು ಡಾ. ಅಮೂಲ್ಯ ''''ಸಮಯ ನಿರ್ವಹಣೆ'''' ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಸಂಜೀವಕುಮಾರ ಭೂಶೆಟ್ಟಿ, ಸುರೇಶ ಮುಗಳಿ, ಸಂಜೀವ ಕುಂದಗೋಳ, ರವಿ ಕುಲಕರ್ಣಿ ಹಾಗೂ ಅನ್ವರ ಸನದಿ, ಡಯಟ್‌ನ ಹಿರಿಯ ಉಪನ್ಯಾಸಕರು ಇದ್ದರು.