ಮಡಿಕೇರಿ: ಗೌರಿಗಣೇಶೋತ್ಸವ ಸಮಿತಿ, ಪದಾಧಿಕಾರಿಗಳೊಂದಿಗೆ ಸಭೆ

KannadaprabhaNewsNetwork |  
Published : Aug 01, 2025, 12:30 AM IST
ಚಿತ್ರ : 30ಎಂಡಿಕೆ2 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್  ಮಾತನಾಡಿದರು.  | Kannada Prabha

ಸಾರಾಂಶ

ಗೌರಿಗಣೇಶೋತ್ಸವ ಸಮಿತಿ ಮತ್ತು ಪದಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ, ಮಡಿಕೇರಿ ಗ್ರಾಮಾಂತರ, ಭಾಗಮಂಡಲ, ನಾಪೋಕ್ಲು ಮತ್ತಿತರ ಉಪವಿಭಾಗ ವ್ಯಾಪ್ತಿಯ ಗೌರಿಗಣೇಶೋತ್ಸವ ಸಮಿತಿ ಮತ್ತು ಪದಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನಗರದ ಕಾವೇರಿ ಹಾಲ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಎಸ್ಪಿ ರಾಮರಾಜನ್ ಮಾತನಾಡಿ, ಶಾಂತಿ ಸುವ್ಯವಸ್ಥೆ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕ ಉತ್ಸವ ಸಮಿತಿಗಳು ಸುವ್ಯವಸ್ಥಿತವಾಗಿ ಗಣೇಶೋತ್ಸವ ಆಚರಿಸಬೇಕು ಎಂದು ಸಲಹೆ ನೀಡಿದರು.

ಗೌರಿ-ಗಣೇಶೋತ್ಸವದಲ್ಲಿ ಮದ್ಯಪಾನ ಮಾಡಿ ರಂಪಾಟ ಮೆರೆಯುವವರ ವಿರುದ್ಧ ಹಾಗೂ ಉತ್ಸವದ ಹೆಸರಿನಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಕೆ.ರಾಮರಾಜನ್ ಎಚ್ಚರಿಕೆ ನೀಡಿದರು.

ಗಣೇಶೋತ್ಸವವನ್ನೇ ಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುತ್ತಾರೆ. ಇದು ಆಗಬಾರದು. ಇಂದು ನೀವು ಮಾಡುತ್ತಿರುವಿರೋ ಅದನ್ನೇ ಮುಂದಿನ ಪೀಳಿಗೆ ಅನುಕರಿಸುತ್ತದೆ. ಅಬ್ಬರದ ಡಿಜೆ ಶಬ್ಧದಿಂದ ಹಿರಿಯರು ಮತ್ತು ಪುಟ್ಟ ಮಕ್ಕಳಿಗೆ ಅಪಾಯಾಗುತ್ತದೆ. ಜೊತೆಗೆ ಸುಂದರ ಪರಿಸರ ಹೊಂದಿರುವ ಕೊಡಗಿನಲ್ಲಿ ಪರಿಸರ ಮಾಲಿನ್ಯವಾಗದಂತೆ ರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿದರು.

ರಸ್ತೆಗಳಲ್ಲಿ ಯಾವದೇ ಕಾರಣಕ್ಕೂ ನಿಂತು ಬಲವಂತದ ಹಣವಸೂಲಿ ಮಾಡುವಂತಿಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು. ಇದನ್ನೂ ಮೀರಿ ನಿಯಮಕ್ಕೆ ವಿರುದ್ಧವಾಗಿ ಮಾಡೇ ಮಾಡುತ್ತೇವೆ ಅಂದಲ್ಲಿ ನಾವು ಬೇರೆ ರೀತಿಯೇ ಮಾಡುತ್ತೇವೆ ಎಂದು ಎಸ್ಪಿ ಎಚ್ಚರಿಕೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಬಾರಿಕೆ ಮಾತನಾಡಿ ಈಗಾಗಲೇ ಮಾಲಿನ್ಯದಿಂದಾಗಿ ಪ್ರಕೃತಿಯೇ ತಿರುಗಿಬಿದ್ದಿದೆ. ಭಾರೀ ಶಬ್ಧದಿಂದ ವಯಸ್ಕರಿಗೆ ಸಮಸ್ಯೆಯಾಗುತ್ತದೆ. ಇವೆಲ್ಲವನ್ನೂ ನಾವೇ ಹತೋಟಿಗೆ ತರಬೇಕೆಂದು ದಿನೇಶ್ ಸಲಹೆ ನೀಡಿದರು.

ವೃತ್ತ ನಿರೀಕ್ಷಕ ರಾಜು ಮಾತನಾಡಿ ಗೌರಿ ಗಣೇಶೋತ್ಸವವನ್ನು ಶಾಂತಿ ಸುವ್ಯವಸ್ಥೆ ಮತ್ತು ಪರಿಸರಸ್ನೇಹಿಯಾಗಿ ಆಚರಿಸಿ ಪೊಲೀಸರೊಂದಿಗೆ ಸಹಕಾರ ನೀಡಬೇಕು. ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಕಡಿಮೆ ಶಬ್ದದ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಬೇಕು ಎಂದು ಹೇಳಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು. ಸಾರ್ವಜನಿಕ ಕಟ್ಟಡಗಳಲ್ಲಿ ಬ್ಯಾನರ್, ಬಂಟಿಂಗ್ಸ್ ಅಳವಡಿಸುವಂತಿಲ್ಲ. ಬಲವಂತದ ವಂತಿಗೆ ಸಂಗ್ರಹ ಮಾಡಬಾರದು. ಅಬ್ಬರದ ಡಿಜೆಗೆ ಅವಕಾಶವಿಲ್ಲ. ಸಮಿತಿಯಲ್ಲಿ ನುರಿತ ಈಜುಗಾರರು ಇರಬೇಕು ಎಂದರು.

ಸಭೆಯಲ್ಲಿ ಡಿವೈಎಸ್ಪಿ ಸೂರಜ್, ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ತಹಸೀಲ್ದಾರ್ ಶ್ರೀಧರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ತಾಪಂ ಇಓ ಸುನಿತಾ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಗ್ರಾಮಾಂತರ ಎಸ್.ಐ.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ