ಪಂಚಮಸಾಲಿ ಪೀಠದಲ್ಲಿ ಮೇ 31ರವರೆಗೆ ಸಭೆ-ಸಮಾರಂಭ ನಿಷೇಧ: ಡಿಸಿ ಆದೇಶ

KannadaprabhaNewsNetwork |  
Published : May 06, 2026, 02:00 AM IST
(ಜಿಲ್ಲಾಧಿಕಾರಿ) | Kannada Prabha

ಸಾರಾಂಶ

ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟಿಗಳು ಹಾಗೂ ವಚನಾನಂದ ಶ್ರೀಗಳ ಬೆಂಬಲಿಗರ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆ, ಮಠದ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಸೋಮವಾರ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

- ಮಠದಲ್ಲಿ ದೈನಂದಿನ ಧಾರ್ಮಿಕ ಪೂಜಾ ವಿಧಾನಗಳಿಗೆ ಯಾವುದೇ ಅಡ್ಡಿಯಿಲ್ಲ

- ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ ಆದೇಶ ಜಾರಿಗೊಳಿಸಿರುವ ಡಿಸಿ

- ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 163ರ ಪ್ರಕಾರ ನಿಷೇಧಾಜ್ಞೆ ಜಾರಿ

- - -

ಕನ್ನಡಪ್ರಭ ವಾರ್ತೆ ಹರಿಹರ

ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟಿಗಳು ಹಾಗೂ ವಚನಾನಂದ ಶ್ರೀಗಳ ಬೆಂಬಲಿಗರ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆ, ಮಠದ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಸೋಮವಾರ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಮೇ 4ರಿಂದ ಮೇ 31ರವರೆಗೆ ಪೀಠದ ಆವರಣದಲ್ಲಿ ಯಾವುದೇ ರೀತಿಯ ಸಭೆ- ಸಮಾರಂಭ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಗಂಗಾಧರ ಸ್ವಾಮಿ ಆದೇಶ ಹೊರಡಿಸಿದ್ದಾರೆ.

ಮಾ.10 ರಿಂದ ಏ.27 ರವರೆಗೆ ಮಠದಲ್ಲಿ ಟ್ರಸ್ಟಿಗಳು ಮತ್ತು ವಚನಾನಂದ ಶ್ರೀಗಳ ಬೆಂಬಲಿಗರ ನಡುವೆ ನಡೆದ ಸರಣಿ ಸಭೆಗಳು ಹಾಗೂ ಪತ್ರಿಕಾಗೋಷ್ಠಿಗಳು ಉದ್ವಿಗ್ನ ವಾತಾವರಣ ನಿರ್ಮಿಸಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ವರದಿ ನೀಡಿದ್ದಾರೆ. ಮಠದಲ್ಲಿ ಉದ್ರೇಕಿತ ಭಾಷಣಗಳನ್ನು ಮಾಡುವ ಮೂಲಕ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವ ಮೂಲಕ ಸಾರ್ವಜನಿಕ ಶಾಂತಿ ಕದಡಲಾಗುತ್ತಿದೆ. ಇದರಿಂದ ಮಠದ ಆಸ್ತಿಗೆ ಹಾನಿಯಾಗುವ ಮತ್ತು ಸಾರ್ವಜನಿಕರ ಪ್ರಾಣಹಾನಿ ಆಗುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆ ನಿಷೇಧಾಜ್ಞೆ ಹೊರಡಿಸಲಾಗುತ್ತಿದೆ ಎಂದು ಡಿಸಿ ಆದೇಶದಲ್ಲಿ ವಿವರಿಸಲಾಗಿದೆ.

ಈ ನಿಷೇಧಾಜ್ಞೆಯು ಕೇವಲ ಸಭೆ, ಸಮಾರಂಭ ಮತ್ತು ಪತ್ರಿಕಾಗೋಷ್ಠಿಗಳಿಗೆ ಅನ್ವಯಿಸಲಿದೆ. ಮಠದಲ್ಲಿ ನಡೆಯುವ ದೈನಂದಿನ ಧಾರ್ಮಿಕ ಪೂಜಾ ವಿಧಾನಗಳಿಗೆ ಯಾವುದೇ ಅಡ್ಡಿ ಆಗುವುದಿಲ್ಲ. ಆದರೆ, ಮೇ 31ರವರೆಗೆ ಯಾವುದೇ ಬಣಗಳು ಶಕ್ತಿ ಪ್ರದರ್ಶನ ಮಾಡುವಂತಿಲ್ಲ.

ಈ ಆದೇಶದ ಪ್ರತಿಯನ್ನು ವಚನಾನಂದ ಮಹಾಸ್ವಾಮಿಗಳು, ಲೆಕ್ಕಕೊಡಿ ಚಳವಳಿ ಸಮಿತಿಯ ಅಧ್ಯಕ್ಷ ಎಂ.ಜಿ. ಪರಮೇಶ್ವರಗೌಡ, ಬಿ.ಸಿ. ಉಮಾಪತಿ ಮತ್ತು ಜ್ಯೋತಿ ಪ್ರಕಾಶ್ ಅವರಿಗೆ ರವಾನಿಸಲಾಗಿದೆ. ಪೀಠದಲ್ಲಿ ಸದ್ಯ ಪರಿಸ್ಥಿತಿ ಜಿಲ್ಲಾಡಳಿತದ ಹದ್ದಿನ ಕಣ್ಣಿನಲ್ಲಿದ್ದು, ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ-ಶಿರಸಿ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಹುಬ್ಬಳ್ಳಿಯಿಂದ ಸಾವಿರಾರು ಜನ