ಕನ್ನಡಪ್ರಭ ವಾರ್ತೆ ಮಂಡ್ಯ
ಅಧ್ಯಕ್ಷರ ಅವಧಿ ಮುಗಿದು ಇಪ್ಪತ್ತು ದಿನಗಳಾದರೂ ರಾಜೀನಾಮೆ ನೀಡದೆ ಉದ್ಧಟತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ಸಂಘದ ಬೈಲಾ ಪ್ರಕಾರ ಸಂಘಕ್ಕೆ ಚುನಾವಣೆ ನಡೆಸಬೇಕು. ಏಕಪಕ್ಷೀಯವಾಗಿ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರೆಯುತ್ತಾ ಭಂಡತನ ತೋರುತ್ತಿದ್ದಾರೆ. ಸಂಘದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ರಾಜೀನಾಮೆ ನೀಡುವಂತೆ ಬಿಗಿಪಟ್ಟು ಹಿಡಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ಬಿಡದೆ ಸದಸ್ಯರು ಅಧ್ಯಕ್ಷ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರ ರಕ್ಷಣೆಯಲ್ಲಿ ಸಂಘದ ಆವರಣದಿಂದ ಕಾರಿನಲ್ಲಿ ತೆರಳಲು ಯತ್ನಿಸಿದಾಗ ಸದಸ್ಯರು ಮತ್ತೆ ಘೇರಾವ್ ಹಾಕಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಸದಸ್ಯರನ್ನು ಸಮಾಧಾನಪಡಿಸಿ ಅಧ್ಯಕ್ಷರು ತೆರಳುವುದಕ್ಕೆ ಅನುವು ಮಾಡಿಕೊಟ್ಟರು.ನಡೆದಿದ್ದೇನು?
ಜಿಲ್ಲಾಧ್ಯಕ್ಷರ ಅಧಿಕಾರವಧಿ ಮಾ.೬ರಂದೇ ಮುಕ್ತಾಯವಾಗಿದೆ. ಆದರೂ ಇದುವರೆಗೆ ರಾಜೀನಾಮೆ ನೀಡಿಲ್ಲ. ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನೂ ಆರಂಭಿಸಿಲ್ಲ. ಹಿಂದಿನ ಆಡಳಿತ ಮಂಡಳಿಯವರನ್ನೇ ಜೊತೆಯಲ್ಲಿಟ್ಟುಕೊಂಡು ಸರ್ವಾಧಿಕಾರಿಯಂತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಕುರುಬರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿನಿಲಯದ ಕಾಮಗಾರಿಯಲ್ಲಿ ಹಣ ಲಪಟಾಯಿಸಬೇಕೆನ್ನುವುದೇ ಇವರ ಹುನ್ನಾರವಾಗಿದೆ. ಅದಕ್ಕಾಗಿ ಮತ್ತೊಂದು ಅವಧಿಗೆ ಈಗಿನ ಆಡಳಿತ ಮಂಡಳಿಯನ್ನು ಮುಂದುವರೆಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಹಿಂದಿನ ಆಡಳಿತ ಮಂಡಳಿಯನ್ನು ಮುಂದುವರೆಸದೆ, ಚುನಾವಣೆ ನಡೆಸುವಂತೆ ಡಿ.೨೮ರಂದು ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲೂ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅಂದಿನ ಸಭೆಯೂ ಸಹ ರದ್ದಾಗಿತ್ತು ಆದರೂ ಸಹ, ಅಧ್ಯಕ್ಷ ಎಂ.ಸುರೇಶ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಭೆಯಲ್ಲಿ ನಿರ್ಣಯವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಆಡಳಿತ ಮಂಡಳಿಯನ್ನು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.
ಕಪ್ಪು ಮಸಿ ಎರಚಿದ ಸದಸ್ಯರು:
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ಪೊಲೀಸರ ಎದುರೇ ಅಧ್ಯಕ್ಷನಿಗೆ ಸದಸ್ಯರು ತರಾಟೆ ತೆಗೆದುಕೊಂಡರು. ಬಳಿಕ ಪೊಲೀಸರ ರಕ್ಷಣೆಯಲ್ಲಿ ಅಧ್ಯಕ್ಷ ಸುರೇಶ್ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ ಸದಸ್ಯರು ಕಾರಿನ ಮುಂದೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲು ಮುಂದಾದರು. ಬಳಿಕ ಪೊಲೀಸರು ಸದಸ್ಯರನ್ನು ಸಮಾಧಾನಪಡಿಸಿ ಅಧ್ಯಕ್ಷ ಸುರೇಶ್ ಅವರನ್ನು ಕಳುಹಿಸಿಕೊಟ್ಟರು.