ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಶಕ್ತಿಯುತವಾಗಿದೆ.
ಬಳ್ಳಾರಿ: ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಬಲಿಷ್ಠಗೊಳಿಸಲು ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ ಎಂದು ದೇವದುರ್ಗ ಕ್ಷೇತ್ರದ ಶಾಸಕಿ ಕರಿಯಮ್ಮ ನಾಯಕ ಹೇಳಿದರು.
ನಗರದಲ್ಲಿ ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಶಕ್ತಿಯುತವಾಗಿದೆ. ಈ ಹಿಂದಿನಿಂದಲೂ ಈ ಜಿಲ್ಲೆಯ ಜನರು ನಮ್ಮ ಪಕ್ಷದ ಜೊತೆ ಇದ್ದಾರೆ. ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಬಳ್ಳಾರಿಗೆ ಆಗಮಿಸಿ, ಪಕ್ಷದ ಮುಖಂಡರು ಹಾಗೂ ಕಾಯಕರ್ತರನ್ನು ಭೇಟಿ ಮಾಡುವರು. ಪಕ್ಷದ ಬೆಳವಣಿಗೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು, ತಾಲೂಕು, ಜಿಪಂ ಚುನಾವಣೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದರು.ಜಿಲ್ಲಾ ಉಸ್ತುವಾರಿ ಮುಖಂಡ ಮಹಾಂತೇಶ್ ಪಾಟೀಲ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವುದು ಸದ್ಯ ನಮ್ಮ ಮುಖ್ಯ ಯೋಜನೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ನೋಂದಣಿ ಕಾರ್ಯ ನಡೆಯಲಿದೆ. ಈ ಹಿಂದಿನಂತೆಯೇ ಪಕ್ಷವನ್ನು ಜಿಲ್ಲೆಯಲ್ಲಿ ಮುನ್ನೆಲೆಗೆ ತರುವ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಮೈಸೂರು ಜಿಲ್ಲೆಯ ಕುಮಾರಸ್ವಾಮಿ, ವಿಜಯನಗರ ಜಿಲ್ಲೆಯ ಅಧ್ಯಕ್ಷ ಕೊಟ್ರೇಶ್, ಬಳ್ಳಾರಿಯ ಅದ್ದಿಗೇರಿ ರಾಮಣ್ಣ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು. ಇದೇ ವೇಳೆ ಪಕ್ಷದ ನೋಂದಣಿ ಕಾರ್ಯಕ್ಕೆ ಶಾಸಕಿ ಕರಿಯಮ್ಮ ನಾಯಕ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.