ಕನ್ನಡಪ್ರಭ ವಾರ್ತೆ ಮುಂಡರಗಿ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಬಸವರಾಜ ಹೊರಟ್ಟಿಯವರ ಮಾರ್ಗದರ್ಶನದಲ್ಲಿ ನ. 17ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಹೋರಾಟವು ಈಗಾಗಲೇ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈ ಕುರಿತು ಸರ್ಕಾರದ ಗಮನವನ್ನು ಹಲವು ಬಾರಿ ಸೆಳೆದಿದ್ದರೂ ಬೇಡಿಕೆಗಳು ಈಡೇರದ ಕಾರಣ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.2006ರ ಎ. 1ರ ನಂತರ ನೇಮಕಗೊಂಡ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿಯನ್ನು ಜಾರಿಗೊಳಿಸುವುದು ಹಾಗೂ 2006ರ ಎ. 1ರ ಮೊದಲು ಅಧಿಸೂಚನೆಯಾಗಿ ನಂತರ ನೇಮಕಾತಿ ಆದೇಶ ಪಡೆದ ನೌಕರರನ್ನು ಹಳೆಯ ಪಿಂಚಣಿಗೆ ಒಳಪಡಿಸುವುದು. ಉಚ್ಚ ನ್ಯಾಯಾಲಯದ ಆದೇಶದಂತೆ ಕಾಲ್ಪನಿಕ ವೇತನ ಜಾರಿಗೊಳಿಸುವುದು ಮತ್ತು ಅನುದಾನಿತ ಶಾಲೆಗಳಲ್ಲಿ 2015ರಿಂದ ಇಲ್ಲಿಯವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಆದೇಶ ಹೊರಡಿಸುವುದು. ಜೊತೆಗೆ ಚಿತ್ರಕಲಾ, ಸಂಗೀತ, ಹೊಲಿಗೆ, ನಾಟಕ ಮುಂತಾದ ಖಾಲಿ ಇರುವ ಹುದ್ದೆಗಳನ್ನು ತುಂಬುವುದು, 1995ರ ನಂತರ ಪ್ರಾರಂಭಗೊಂಡ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು. ದ್ವಿಭಾಷಾ ಪದ್ಧತಿಯನ್ನು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.