ಹೋರಾಟಗಾರರ, ಸೈನಿಕರ, ರೈತರ ಸ್ಮಾರಕ ಉದ್ಘಾಟನೆ ಇಂದು

KannadaprabhaNewsNetwork |  
Published : Jan 10, 2026, 02:30 AM IST
9ಕೆಕೆಆರ್1:ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ಹಾಗೂ ರೈತರ ಸ್ಮಾರಕ.  | Kannada Prabha

ಸಾರಾಂಶ

ಸ್ವಾತಂತ್ರ್ಯಕ್ಕಾಗಿ ಹಾಗೂ ನಿಜಾಮರ ವಿರುದ್ಧ ವಿಮೋಚನಾ ಹೋರಾಟದಲ್ಲಿ ಗ್ರಾಮದ 26ಕ್ಕೂ ಹೆಚ್ಚು ಕೆಚ್ಚೆದೆಯ ಹೋರಾಟಗಾರರು ಶ್ರಮಿಸಿ ಈ ಭಾಗದ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಮೌಲ್ಯಯುತ ಸೇವೆ ನೀಡಿದ್ದಾರೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಶಮಿಪುರವೆಂದು ಹೆಸರಾಗಿದ್ದ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜ.10ರ ಶನಿವಾರ ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ಹಾಗೂ ರೈತರ ಸ್ಮಾರಕ ಉದ್ಘಾಟನೆಯಾಗಲಿದೆ.

15 ಅಡಿ ಎತ್ತರವುಳ್ಳ ಸ್ಮಾರಕ ಇದು. ಮೇಲೆ ಅಶೋಕ ಸ್ತಂಭ. ಒಂದು ಕಡೆ ಪ್ರಥಮ ಫೀಲ್ಡ ಮಾರ್ಷಲ್ ಜನರಲ್ ಕಾರ್ಯಪ್ಪ, ಇನ್ನೊಂದು ಕಡೆ ರೈತನ ಚಿತ್ರ, ಸರ್ದಾರ ವಲ್ಲಭಬಾಯಿ ಪಟೇಲ್ ಚಿತ್ರ, ಭಾರತ ಮಾತೆಯ ಚಿತ್ರ, ಕೆಳಗಡೆ ಕಲ್ಲಿನಲ್ಲಿ ಪರಿಚಯ ಲೇಖನಗಳಿವೆ.

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಕಪ್ಪತಮಠದ ಚಿದಾನಂದ ಸ್ವಾಮೀಜಿ, ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಹಾಲಪ್ಪ ಆಚಾರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗೂಳರಡ್ಡಿ, ಬಸಪ್ಪ ಮೂಲಿಮನಿ, ಅಧಿಕಾರಿಗಳು, ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಲಿದ್ದಾರೆ.

ಸೈನಿಕರ ನೆನಪಿಗಾಗಿ ಸ್ಮಾರಕ:ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಖ್ಯಾತಿಯ ಹಾಗೂ ರಜಾಕರ ವಿರುದ್ಧ ಧ್ವನಿ ಎತ್ತಿದ 26 ಜನ ಸ್ವಾತಂತ್ರ್ಯ ಹೋರಾಟಗಾರರು, 28 ಜನ ಹಾಲಿ, ಮಾಜಿ ಸೈನಿಕರುಳ್ಳ ಹಾಗೂ ಕುಕನೂರು ತಾಲೂಕಿನಲ್ಲಿ ಅತೀ ಹೆಚ್ಚು ಭೂ ಹಿಡುವಳಿ ಹೊಂದಿದ ಎರಡನೇ ಗ್ರಾಮ ಬನ್ನಿಕೊಪ್ಪ ಆಗಿದೆ. ಅವರ ಸವಿನೆನಪಿಗಾಗಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ನೆನಪಿಗೆ ಅವರ ಪರಿಚಯವುಳ್ಳ ಸ್ಮಾರಕ ನಿರ್ಮಾಣ ಮಾಡಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಹಾಗೂ ನಿಜಾಮರ ವಿರುದ್ಧ ವಿಮೋಚನಾ ಹೋರಾಟದಲ್ಲಿ ಗ್ರಾಮದ 26ಕ್ಕೂ ಹೆಚ್ಚು ಕೆಚ್ಚೆದೆಯ ಹೋರಾಟಗಾರರು ಶ್ರಮಿಸಿ ಈ ಭಾಗದ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಮೌಲ್ಯಯುತ ಸೇವೆ ನೀಡಿದ್ದಾರೆ.

ರೇಣುಕಾಚಾರ್ಯ ಶತಕ, ಶ್ರೀಪಂಚಾಕ್ಷರಿ ಶತಕದಂತಹ ಹನ್ನೊಂದಕ್ಕೂ ಹೆಚ್ಚು ಕೃತಿ ರಚಿಸಿದ ಪ್ರವಚನಕಾರ, ಕೀರ್ತನಕಾರ, ವಾಗ್ಮೀ ಹಾಗೂ ಆಶು ಕವಿ ಪಂಡಿತ ಅಮರನಾಥ ಶಾಸ್ತ್ರೀಗಳು ಸಹ ಇದೇ ಬನ್ನಿಕೊಪ್ಪದವರು.

ಹರಿಜನ ನಿಧಿಗೆ ಹಣ ಸಂಗ್ರಹ:ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಳಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿಗಳ ನೇತೃತ್ವದ ಮುಂಡರಗಿ ಶಿಬಿರದಲ್ಲಿ ಯೋಧರ ತಂಡದ ನಾಯಕರಾಗಿ ರಜಾಕರ ತಂಡಗಳ ವಿರುದ್ಧ ಜೀವನದ ಪರಿವೆಯಿಲ್ಲದೇ ವೀರೋಚಿತ ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಕಮಾಂಡರ್ ಶಂಕ್ರಪ್ಪ ದೊಡ್ಡಯರಾಶಿ ಬನ್ನಿಕೊಪ್ಪದವರು.

1939 ನೇ ವರ್ಷದಲ್ಲಿಯೇ ವಾಣಿವಿಲಾಸ ಸಂಗೀತ ನಾಟಕ ಮಂಡಳಿ ಕಟ್ಟಿ ಯರಾಶಿ ಭರಮಪ್ಪ ಸಾಧನೆಗೈದರು. ಆ ವೇಳೆ ನಾಲ್ಕು ನಾಟ್ಯ ಸಂಘ ಬನ್ನಿಕೊಪ್ಪದಲ್ಲಿದ್ದವು. ವಾಣಿಜ್ಯ ಕ್ಷೇತ್ರದಲ್ಲಿ ಆಯಿಲ್ ಕಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭೂಮರಡ್ಡಿ ಬಸಪ್ಪ ಈ ಗ್ರಾಮದವರು.

1934 ಮಾ.13ರಂದು ಹರಿಜನ ನಿಧಿಗೆ ಹಣ ಸಂಗ್ರಹಣೆಗಾಗಿ ಬಳ್ಳಾರಿಯಿಂದ ಕೊಪ್ಪಳ ಮಾರ್ಗವಾಗಿ ಗದುಗಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಾತ್ಮ ಗಾಂಧೀಜಿಯವರನ್ನು ಭಾನಾಪುರದ ರೈಲು ನಿಲ್ದಾಣದಲ್ಲಿ ಕಂಡು ಈ ಭಾಗದ ಬರಗಾಲ ಹಾಗೂ ಬಡರೈತರ ಬವಣಿ ಕುರಿತು ಮನವಿ ಅರ್ಪಿಸಿದ ತಂಡದ ನಾಯಕತ್ವದಲ್ಲಿದ್ದವರಲ್ಲಿ ಆಡೂರಿನ ಶಿರೂರ ವೀರಭದ್ರಪ್ಪನವರು ಹಾಗೂ ಬನ್ನಿಕೊಪ್ಪದ ಬೇಳೂರು ತಿಮ್ಮನಗೌಡರು ಪ್ರಮುಖರು.

₹5 ಲಕ್ಷ ಬನ್ನಿಕೊಪ್ಪ ಗ್ರಾಪಂ ಅನುದಾನ, ಮಾಜಿ ಸೈನಿಕ ಹಾಗೂ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪೂರ ₹2.32 ಲಕ್ಷ ದೇಣಿಗೆ, ಸುರೇಶ ಭೂಮರೆಡ್ಡಿ ಅವರಿಂದ ಪರಿಚಯ ಕಲ್ಲಿನ ದೇಣಿಗೆ, ಗ್ರಾಮದ ಹಾಲಿ, ಮಾಜಿ ಸೈನಿಕರು, ಗ್ರಾಮಸ್ಥರು ಸಹಕಾರ ನೀಡಿದ್ದಾರೆ.

ಬನ್ನಿಕೊಪ್ಪ ಗ್ರಾಮದಲ್ಲಿ ಶತಮಾನಗಳ ಕನಸು ಆಗಿರುವ ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ಹಾಗೂ ರೈತರ ಸ್ಮಾರಕದ ಉದ್ಘಾಟನೆ ಶನಿವಾರ ಗ್ರಾಮಸ್ಥರ ಸಹಕಾರದಿಂದ ಜರುಗುತ್ತಿದೆ.ಮುಂದಿನ ಪೀಳಿಗೆಗೆ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹಾಲಿ, ಮಾಜಿ ಸೈನಿಕರ ಪರಿಚಯ ಆಗಲಿ ಎಂದು ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಈ ಸ್ಮಾರಕ ಬನ್ನಿಕೊಪ್ಪ ಗ್ರಾಮದ ಇತಿಹಾಸ ಸಾರುವ ಹೆಮ್ಮೆಯ ಸ್ಮಾರಕ ಆಗಲಿದೆ ಎಂದು ಗ್ರಾಪಂ ಅಧ್ಯಕ್ಷ ಹಾಗೂ ಮಾಜಿ ಸೈನಿಕ ನಾಗರಾಜ ವೆಂಟಕಾಪೂರ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ಹಾಗೂ ರೈತರ ಸ್ಮಾರಕದ ಉದ್ಘಾಟನೆ ಆಗುತ್ತಿರುವುದು ಹೆಮ್ಮೆ ಸಂಗತಿ. ಗ್ರಾಮದ ಯುವಕರಿಗೆ ಈ ಸ್ಮಾರಕ ಮುಂದಿನ ದಿನಗಳಲ್ಲಿ ಸ್ಫೂರ್ತಿ ಆಗುತ್ತದೆ. ನಾವೂ ಸೈನಿಕರು ಆಗಬೇಕು ಎಂಬುದು ಇದರಿಂದ ತಿಳಿಯುತ್ತದೆ. ಹಿಂದಿನ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಾಲಿ, ಮಾಜಿ ಸೈನಿಕರು ಹಾಗೂ ಗ್ರಾಮದ ರೈತ ಸೇವೆ ಮತ್ತಷ್ಟು ಗ್ರಾಮದ ಯುವಕರಿಗೆ ಚೈತನ್ಯ ತುಂಬುವ ಕಾರ್ಯ ಮಾಡಲಿ ಎಂದು ಸ್ಮಾರಕ ನಿರ್ಮಿಸಲಾಗಿದೆ ಎಂದು ಬನ್ನಿಕೊಪ್ಪ ಗ್ರಾಮದ ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ