ಲಕ್ಷ್ಮೇಶ್ವರ: ಬೆಳೆಗಳ ಜಿಪಿಎಸ್ ಇಲ್ಲದೆ ರೈತರು ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಪ್ರತಿವರ್ಷ ಸಂಬಂಧಿಸಿದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬೆಳೆ ಜಿಪಿಎಸ್ ಮಾಡಬೇಕು ಎಂದು ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.
ಇದೀಗ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರಿಗೆ ಪ್ರತಿ ಕ್ವಿಂಟಲ್‌ಗೆ ₹೨೫೦ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಇದರ ಬಗ್ಗೆ ರೈತರಲ್ಲಿ ಸಾಕಷ್ಟು ಗೊಂದಲ ಇದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪಕ್ಷಾತೀತ ರೈತಪರ ಹೋರಾಟ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹಾಗೂ ಟಿಎಪಿಸಿಎಂಎಸ್‌ನ ನಿರ್ದೇಶಕ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಬೆಂಬಲ ಬೆಲೆಯಲ್ಲಿ ಈಗಾಗಲೇ ಮಾರಾಟ ಮಾಡಿದ ಮೆಕ್ಕೆಜೋಳ ಬೆಳೆಗಾರರ ಖಾತೆಗೆ ಜಿಲ್ಲಾಧಿಕಾರಿಗಳು ಕೂಡಲೇ ಹಣ ಸಂದಾಯ ಆಗುವ ವ್ಯವಸ್ಥೆ ಮಾಡಬೇಕು. ನಾನು ನಿರ್ದೇಶಕನಾಗಿರುವ ಟಿಎಪಿಸಿಎಂಎಸ್‌ನ ಬೆಂಬಲ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ ನಡೆಯುತ್ತಿದ್ದು, ಈ ಕುರಿತು ಅಧಿಕಾರಿಗಳು ಎಚ್ಚರ ವಹಿಸಬೇಕು. ಮಾರಾಟಕ್ಕಾಗಿ ಪಾಳಿ ಹಚ್ಚಿರುವ ರೈತರಿಂದ ಮೆಕ್ಕೆಜೋಳ ಖರೀದಿಸದೆ ತಮಗೆ ಬೇಕಾದವರ ಮೆಕ್ಕೆಜೋಳವನ್ನು ಖರೀದಿಸಲಾಗುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಶಂಕ್ರಣ್ಣ ಬ್ಯಾಡಗಿ, ರುದ್ರಪ್ಪ ಮರುಡಿ, ಪಾಟೀಲ, ಶಿವಪುತ್ರಪ್ಪ ತಾರಿಕೊಪ್ಪ, ನಿಂಗಪ್ಪ ಮೋಡಿ, ಫಕ್ಕಣ್ಣ ಮೋಡಿ ಸೇರಿದಂತೆ ಮತ್ತಿತರರು ಇದ್ದರು. ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಡಂಬಳ: ಡೋಣಿ ಮತ್ತು ಡಂಬಳ ಮಾರ್ಗದ ಮಧ್ಯೆ ಶುಕ್ರವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಹಿರೇವಡ್ಡಟ್ಟಿ ಗ್ರಾಮದ ಹನುಮಪ್ಪ ಸಿದ್ದಪ್ಪ ಜಂಗನವಾರಿ(58) ಮೃತಪಟ್ಟ ವ್ಯಕ್ತಿ. ಇವರು ಡಂಬಳ ಗ್ರಾಮದಲ್ಲಿ ಗೌಂಡಿ ಕೆಲಸ ಮುಗಿಸಿ ಬೈಕ್ ಮೂಲಕ ತನ್ನ ಮಗಳ ಊರಾದ ಡೋಣಿ ಗ್ರಾಮಕ್ಕೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.