ಆನೆ ನಿರೋಧಕ ಕಂದಕ ನಿರ್ಮಿಸಲು ಆಗ್ರಹಿಸಿ ಗ್ರಾಮಸ್ಥರಿಂದ ವಲಯ ಅರಣ್ಯಾಧಿಕಾರಿಗೆ ಮನವಿ
ಕಳೆದ 2 ತಿಂಗಳಿಂದ ಬಡಗಬೈಲು ಹಾಗೂ ನೇರ್ಲೆ ಕೊಪ್ಪ ಗ್ರಾಮಗಳಲ್ಲಿ 3 ಕಾಡಾನೆಗಳು ಓಡಾಡುತ್ತಾ ಬೆಳೆಗಳ ನಾಶ ಮಾಡುತ್ತಿವೆ. ಆನೆ ಕಂದಕ ನಿರ್ಮಿಸಿ ಗ್ರಾಮಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಎನ್.ಆರ್.ಪುರ ವಲಯ ಅರಣ್ಯಾಧಿಕಾರಿಗಳಿಗೆ ಶನಿವಾರ ಮನವಿ ಪತ್ರ ಅರ್ಪಿಸಿದರು.
ಬಡಗಬೈಲು ಗ್ರಾಮದ ದ್ವಾರಮಕ್ಕಿ, ಕೋಟೆ ಬೈಲು, ಗುಡ್ಡದಮನೆ, ಕನಗೇರಿ, ದಾಸನಗದ್ದೆ ಮತ್ತು ನೇರ್ಲೆಕೊಪ್ಪ ಗ್ರಾಮದ ಮಳಲಿ, ಆಲಂದೂರು ಭಾಗದಲ್ಲಿ ಕಳೆದ 3 ವರ್ಷದಿಂದಲೂ ಕಾಡಾನೆಗಳ ಕಾಟ ಹೆಚ್ಚಾಗಿದೆ. ಆದರೆ, ಕಳೆದ 2 ತಿಂಗಳಿಂದ ಒಂದು ಒಂಟಿ ಆನೆ ಹಾಗೂ ಇತರ ಎರಡು ಕಾಡಾನೆಗಳ ಗುಂಪು ರೈತರ ತೋಟಕ್ಕೆ ನುಗ್ಗಿ ಅಡಕೆ ತೋಟ, ಭತ್ತ, ತೆಂಗು, ಬಾಳೆ ತುಳಿದು ಹಾಳು ಮಾಡುತ್ತಿದೆ. ಬೆಳೆ ಹಾಳಾಗುತ್ತಿರುವುದರಿಂದ ರೈತರು ಬ್ಯಾಂಕ್, ಸಹಕಾರ ಸಂಘಗಳಲ್ಲಿ ಮಾಡಿ ರುವ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆಲವು ದಿನದ ಹಿಂದೆ ಇಬ್ಬರು ರೈತರು ಕಾಡಾನೆ ದಾಳಿಗೆ ಸಿಕ್ಕಿದ್ದರೂ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.ಅಲ್ಲದೆ ಕೋಟೆ ಬೈಲು ಭಾಗದಲ್ಲಿ ಅರಣ್ಯ ಇಲಾಖೆಯವರು ಈಗಾಗಲೇ 400 ಮೀ. ಆನೆ ನಿರೋಧಕ ಕಂದಕ ನಿರ್ಮಿಸಿದ್ದಾರೆ. ಇದನ್ನು ಮಳಲಿವರೆಗೆ 3 ಕಿ.ಮೀ. ಮುಂದುವರಿಸಬೇಕು. ಆನೆ ನಿರೋಧಕ ಕಂದಕ ಮಾಡುವಾಗ ಮಧ್ಯೆ ಬರುವ ಹಳ್ಳಗಳಲ್ಲಿ ಸಿಮೆಂಟ್ ವೆಂಟಿಲೇಷನ್ ಗೋಡೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಲಾಗಿದೆ. ಶೆಟ್ಟಿಕೊಪ್ಪ ಶಾಖೆ ಉಪ ವಲಯ ಅರಣ್ಯಾಧಿಕಾರಿ ಪರಮೇಶ್ವರ ನಾಯಕ್ ಮನವಿ ಸ್ವೀಕಾರ ಮಾಡಿದರು.