ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಪ್ರಮುಖ ರಸ್ತೆಯಾಗಿರುವ ಬಾಣಸಂದ್ರ, ಮಾಯಸಂದ್ರ, ದಬ್ಬೇಘಟ್ಟ ಹಾಗೂ ತಿಪಟೂರು ರಸ್ತೆಯ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದ್ದು. ಸದ್ಯ ಪಟ್ಟಣದಲ್ಲಿ ಪಾದಚಾರಿಗಳು ನಿರಾತಂಕವಾಗಿದ್ದರು. ಆದರೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಕೆಲವು ಬೀದಿ ವಾಪಾರಿಗಳ ಪರ ಬ್ಯಾಂಟಿಂಗ್ ಮಾಡಿ ಅವರು ಬೀದಿ ಬದಿ ವ್ಯಾಪಾರ ಮಾಡಿಕೊಳ್ಳಲು ಮೌಖಿಕ ಸೂಚನೆ ನೀಡಿದ್ದು, ಅವರೇ ಮುಂದೆ ನಿಂತು ಪಟ್ಟಣದ ಮಾಯಸಂದ್ರ ರಸ್ತೆಯ ಸರ್ಕಾರಿ ಹಾಸ್ಟೆಲ್ ಕಾಂಪೌಂಡ್ ಸುತ್ತಾ ಅಂಗಡಿಗಳನ್ನು ಇಟ್ಟುಕೊಳ್ಳಲು ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆಯ ಮೇರೆಗೆ ಶನಿವಾರ ಮಧ್ಯಾಹ್ನದಿಂದ ಹಲವಾರು ಬೀದಿಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಇಟ್ಟುಕೊಳ್ಳಲು ಸಿದ್ದತೆ ನಡೆಸಿದರು. ಒಂದೊಂದಾಗಿ ಅಂಗಡಿಗಳು ಬೀದಿ ಬದಿ ಬಂದು ನಿಂತವು. ಇವರನ್ನು ನೋಡಿ ಮತ್ತೊಂದಿಷ್ಟು ಮಂದಿ ತಮ್ಮ ಅಂಗಡಿಗಳನ್ನು ತಳ್ಳುಗಾಡಿಗಳನ್ನು ತಂದಿಟ್ಟರು. ಹೀಗೆ ಒಂದಕ್ಕೆ ಒಂದರಂತೆ ಗಾಡಿಗಳನ್ನು ತಂದಿಡುತ್ತಿದ್ದಂತೆ ಯಥಾಪ್ರಕಾರ ಈ ಹಿಂದೆ ಇದ್ದಂತೆ ಬೀದಿಬದಿಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಕ್ಕೆ ಇದೊಂದು ಹಸಿರು ನಿಶಾನೆ ಎಂಬಂತೆ ಆಯಿತು.
ಇದನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಬಾಬು ಮತ್ತು ಸಬ್ ಇನ್ಸ್ ಪೆಕ್ಟರ್ ಮೂರ್ತಿ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದು ಬೀದಿಬದಿಯಲ್ಲಿ ತಂದಿಟ್ಟಿದ್ದ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಆದರೆ ಅಂಗಡಿಯವರು ಶಾಸಕರು ಹೇಳಿದ್ದಾರೆ. ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಆ ವೇಳೆಗೆ ಈಗಾಗಲೇ ಸಂತೆ ಮೈದಾನಕ್ಕೆ ಶಿಫ್ಟ್ ಆಗಿರುವ ಹಲವಾರು ಬೀದಿಬದಿ ವ್ಯಾಪಾರಿಗಳು ಸ್ಥಳಕ್ಕೆ ಬಂದು ನಮಗೂ ಅವಕಾಶ ಇಲ್ಲೇ ಕೊಡಿ ಎಂದು ಅಧಿಕಾರಿಗಳಿಗೆ ಬೇಡಿಕೆ ಇಟ್ಟರು. ಇದಕ್ಕೆ ಸೊಪ್ಪು ಹಾಕದ ಅಧಿಕಾರಗಳು ಕೂಡಲೇ ಇಟ್ಟಿರುವ ಅಂಗಡಿಗಳನ್ನು ತೆರವು ಮಾಡದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಬೀದಿಬದಿ ಇದ್ದ ಅಂಗಡಿಗಳನ್ನು ತೆಗೆಸುವುದೇನು? ಪುನಃ ಇಡಿಸುವುದೇನು. ಇದು ಸರಿಯಲ್ಲ. ಎಲ್ಲರಿಗೂ ಒಂದೇ ನ್ಯಾಯ ಇರಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಹಲವಾರು ಮಂದಿ ಶಾಸಕರಿಗೆ ಫೋನಾಯಿಸಿದರೂ ಸಹ ಅಧಿಕಾರಿಗಳು ಯಾವುದಕ್ಕೂ ಕಿವಿಗೊಡಲಿಲ್ಲ. ಸುಪ್ರೀಂ ಕೋರ್ಟೇ ಬೀದಿ ಬದಿ ವ್ಯಾಪಾರಿಗಳಿಂದ ರಸ್ತೆಯನ್ನು ಮುಕ್ತಗೊಳಿಸಿ ಎಂದು ಆದೇಶ ನೀಡಿದೆ. ಇದಕ್ಕೆ ನಾವು ಬೆಲೆ ಕೊಡಲೇ ಬೇಕು. ತಪ್ಪಿದಲ್ಲಿ ನಾವು ಉತ್ತರದಾಯಿತ್ವ ವಾಗಬೇಕಾಗುತ್ತದೆ ಎಂದು ಹೇಳಿದರು. ಅಂತಿಮವಾಗಿ ಸಬ್ ಇನ್ಸ್ ಪೆಕ್ಟರ್ ಮೂರ್ತಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಬಾಬು ಯಾವುದೇ ಶಿಫಾರಸ್ಸಿಗೆ ಹಾಗೂ ಒತ್ತಡಕ್ಕೆ ಒಳಗಾಗಲೇ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದರು. ಶಾಸಕರ ಈ ದ್ವಂದ್ವ ನಿಲುವಿಗೆ ಸಾರ್ವಜನಿಕರು, ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯರುಗಳು ಸೇರಿದಂತೆ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.