ಈ ಹಿಂದೆ ಕೆ.ವಿ.ಶಂಕರೇಗೌಡರು ರೈತರಲ್ಲಿ ಜಾಗೃತಿ ಮೂಡಿಸಲು ಕೂಡಿ ಬಾಳೋಣ ಎಂಬ ಚಲನಚಿತ್ರ ನಿರ್ಮಿಸಿದ್ದರು. ಅಂದಿನ ಕಾಲದಲ್ಲಿ ರಸ್ತೆ, ವಿದ್ಯುತ್, ನೀರು ಇಲ್ಲದಿದ್ದರೂ ಗ್ರಾಮಗಳಲ್ಲಿ ಅನ್ಯೋನ್ಯತೆ ಇತ್ತು. ಸಮಸ್ಯೆಗಳು ಪಂಚಾಯಿತಿಗಳಲ್ಲೇ ನ್ಯಾಯ ತೀರ್ಮಾನವಾಗುತ್ತಿದ್ದವು. ಆದರೆ, ಇಂದು ಎಲ್ಲ ಸೌಲಭ್ಯಗಳಿದ್ದರೂ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಸಹಕಾರಿ ಸಂಘಗಳು ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪದಿಂದ ಹಾಳಾಗುತ್ತಿವೆ. ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೆ ಹೊಳಲು ಸಹಕಾರ ಸಂಘವನ್ನು ರಾಜ್ಯಕ್ಕೆ ಮಾದರಿಯಾಗುವಂತೆ ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಈ ಕಾಲದಲ್ಲಿ ಸಹಕಾರ ಸಂಘಗಳು ಶಿಸ್ತುಬದ್ಧವಾಗಿ ನಡೆಯುವುದೇ ದುಸ್ತರ. ಅಂತಹ ಉದಾಹರಣೆಗಳ ನಡುವೆಯೂ ಸಂಘವು 103 ವರ್ಷಗಳಿಂದ ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಡೆದು ಬಂದಿದೆ. ಅಲ್ಲದೆ ಹಲವಾರು ವರ್ಷಗಳಿಂದ ನಿರಂತರವಾಗಿ ಲಾಭ ಗಳಿಸುತ್ತಿದೆ. ಇದು ನಿಜಕ್ಕೂ ಮೆಚ್ಚುವ ಸಂಗತಿ ಎಂದು ಶ್ಲಾಘಿಸಿದರು.
ದಿವಂಗತ ಕೆ.ವಿ.ಶಂಕರೇಗೌಡರು, ಎಚ್.ಡಿ. ಚೌಡಯ್ಯ, ಎಸ್.ಎಂ. ಕೃಷ್ಣ, ಮದ್ದೂರಿನ ಮಂಚೇಗೌಡರು ಹಾಗೂ ಬೊಮ್ಮೇಗೌಡರು ಸೇರಿದಂತೆ ಅನೇಕ ಹಿರಿಯರು ಮಂಡ್ಯ ಜಿಲ್ಲೆಯ ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 1959ರಲ್ಲಿ ಪ್ರಾರಂಭವಾದ ಹೊಳಲು ಸಹಕಾರ ಸಂಘವು ಇಂದು ಎಲ್ಲಾ ಪಕ್ಷಗಳ ವಿಶ್ವಾಸ ಗಳಿಸಿ ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೂಡಿ ಬಾಳೋಣ ತತ್ವ ಅನುಕರಣೀಯ:
ಈ ಹಿಂದೆ ಕೆ.ವಿ.ಶಂಕರೇಗೌಡರು ರೈತರಲ್ಲಿ ಜಾಗೃತಿ ಮೂಡಿಸಲು ಕೂಡಿ ಬಾಳೋಣ ಎಂಬ ಚಲನಚಿತ್ರ ನಿರ್ಮಿಸಿದ್ದರು. ಅಂದಿನ ಕಾಲದಲ್ಲಿ ರಸ್ತೆ, ವಿದ್ಯುತ್, ನೀರು ಇಲ್ಲದಿದ್ದರೂ ಗ್ರಾಮಗಳಲ್ಲಿ ಅನ್ಯೋನ್ಯತೆ ಇತ್ತು. ಸಮಸ್ಯೆಗಳು ಪಂಚಾಯಿತಿಗಳಲ್ಲೇ ನ್ಯಾಯ ತೀರ್ಮಾನವಾಗುತ್ತಿದ್ದವು. ಆದರೆ, ಇಂದು ಎಲ್ಲ ಸೌಲಭ್ಯಗಳಿದ್ದರೂ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸಾಲ ಮನ್ನಾಕ್ಕೆ ₹2.500 ಕೋಟಿ ಬಿಡುಗಡೆ:
2006- 07ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಎಕರೆಗೆ ತಲಾ ₹25,000 ಸಬ್ಸಿಡಿ ಹಾಗೂ ಸಹಕಾರಿ ಬ್ಯಾಂಕ್ ಗಳ ಸಾಲ ಮನ್ನಾಕ್ಕಾಗಿ ₹2,500 ಕೋಟಿ ಬಿಡುಗಡೆ ಮಾಡಿದ್ದೆ. 2018ರಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಆ ಎಲ್ಲಾ ಕುಟುಂಬಗಳಿಗೂ ಖುದ್ದಾಗಿ ಭೇಟಿ ನೀಡಿ ಸಾಂತ್ವನ ಹೇಳಿದ್ದೆ ಎಂದರು.ಮಂಡ್ಯದ ಜನತೆ ನಮ್ಮ ಪಕ್ಷಕ್ಕೆ 7ಕ್ಕೆ 7 ಸ್ಥಾನಗಳನ್ನು ನೀಡಿ ಆಶೀರ್ವದಿಸಿದ ಶಕ್ತಿಯಿಂದ ಕೇವಲ 14 ತಿಂಗಳ ಅವಧಿಯಲ್ಲಿ ಇಡೀ ರಾಜ್ಯದ ರೈತರ ₹25,000 ಕೋಟಿ ಸಾಲಮನ್ನಾ ಮಾಡಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ ₹750 ರಿಂದ ₹900 ಕೋಟಿ ಹಾಗೂ ಹೊಳಲು ಸೊಸೈಟಿಯೊಂದರಲ್ಲೇ ₹1.95 ಕೋಟಿ ಸಾಲಮನ್ನಾ ಆಗಿದೆ. ಜನರು ತೆರಿಗೆ ರೂಪದಲ್ಲಿ ತುಂಬುವ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ಬಳಸುವುದು ಸರ್ಕಾರದ ಕರ್ತವ್ಯವೇ ಹೊರತು ದೊಡ್ಡಸ್ತಿಕೆಯಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಸತ್ಯಕೀರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಶಿವಕುಮಾರ್, ಎಚ್.ಬಿ.ರಾಮು, ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಸಚ್ಚಿದಾನಂದ, ವಿಜಯಾನಂದ, ರಾಮಚಂದ್ರ, ಮೋಹನ್, ಡಾಲು ರವಿ, ಸದಾನಂದ ಸೇರಿ ಗ್ರಾಮದ ಹಿರಿಯರು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.---------
21ಕೆಎಂಎನ್ ಡಿ25,26ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.
ಮಂಡ್ಯ ತಾಲೂಕಿನ ಹೊಳಲು ಗ್ರಾಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಜಿ ಶಾಸಕ, ಸಹಕಾರಿ ಧುರೀಣ ಎಚ್.ಡಿ.ಚೌಡಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.---------------
ಮಂಡ್ಯದ ಋಣ ತೀರಿಸದೆ ನಾನು ಮಣ್ಣಿಗೆ ಹೋಗುವುದಿಲ್ಲ: ಎಚ್ಡಿಕೆಮಂಡ್ಯ: ನಾನು ಮತ ಕೇಳಲು ಬರದಿದ್ದರೂ ಮಂಡ್ಯ ಜಿಲ್ಲೆಯ ಜನರು ಎರಡೂ ಮುಕ್ಕಾಲು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಿ. ನಾನು ಮಣ್ಣಿಗೆ ಹೋಗುವುದರೊಳಗೆ ಜಿಲ್ಲೆಯ ಹಾಗೂ ರಾಜ್ಯದ ಋಣ ತೀರಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾವುಕರಾದರು.
ರಾಜ್ಯದಲ್ಲಿ ಎನ್ಡಿಎ (ಬಿಜೆಪಿ- ಜೆಡಿಎಸ್) ಮೈತ್ರಿಯನ್ನು ಯಾರೂ ಒಡೆಯಲು ಸಾಧ್ಯವಿಲ್ಲ. 2028ರಲ್ಲಿ ರಾಜ್ಯದಲ್ಲಿ ರೈತಪರ ಹಾಗೂ ಜನಪರ ಸ್ವತಂತ್ರ ಸರ್ಕಾರ ಬರುವುದು ಶತಸಿದ್ಧ. ನನ್ನ ಆರೋಗ್ಯವನ್ನು ಲೆಕ್ಕಿಸದೆ ಹಗಲು- ರಾತ್ರಿ ಹೋರಾಟ ಮಾಡುತ್ತಿದ್ದೇನೆ. ನಾನು ಭಯಪಡುವುದು ರಾಜ್ಯದ 6.5 ಕೋಟಿ ಜನರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ. ತಾಯಿ ಚಾಮುಂಡೇಶ್ವರಿಯ ಅನುಗ್ರಹದಿಂದ ಒಳ್ಳೆಯ ದಿನಗಳು ಬಂದಾಗ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.