ಭೂಮಿಯಲ್ಲಿ ಸಿಗುವ ಅಪರೂಪದ ಖನಿಜಗಳ ರಫ್ತಿನ ಮೇಲೆ ನೆರೆಯ ಚೀನಾ ದೇಶವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಭಾರತವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂತಹ ಖನಿಜಗಳ ಉತ್ಪಾದನೆ ಮತ್ತು ಬಳಕೆಗೆ ಬೃಹತ್ ಪ್ರಮಾಣದ ಯೋಜನೆ ರೂಪಿಸುವ ಅವಕಾಶ ನನಗೆ ಸಿಕ್ಕಿತು. ಹೀಗಾಗಿ ₹7,500 ಕೋಟಿ ಯೋಜನೆ ಆರಂಭಿಸಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜಕೀಯ ದುರುದ್ದೇಶದಿಂದ ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಎಆರ್ ಎಐ ಸ್ಥಾಪನೆಗೆ ಭೂಮಿ ಕೊಡದೇ ಸತಾಯಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು ಎನ್ನುವ ಒಳ್ಳೆಯ ಮನಸ್ಥಿತಿ ಇದ್ದಿದ್ದರೆ ಈ ಸರ್ಕಾರ ಈಗಾಗಲೇ ಈ ಕೇಂದ್ರಕ್ಕೆ ಭೂ ಮಂಜೂರಾತಿ ಮಾಡುತ್ತಿತ್ತು. ಅವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾನೇಸರ್, ಪುಣೆ, ಚೆನ್ನೈ ಮತ್ತು ಭೋಪಾಲ್ ಮಾದರಿಯಲ್ಲಿ ಕರ್ನಾಟಕದಲ್ಲೂ ಕೇಂದ್ರದ ಬೃಹತ್ ಕೈಗಾರಿಕಾ ಇಲಾಖೆಯಿಂದ ಎಆರ್ ಎಐ ಟೆಸ್ಟಿಂಗ್ ಸೆಂಟರ್ ಪ್ರಾರಂಭಿಸಲು 100 ಎಕರೆ ಹಾಗೂ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಘಟಕಕ್ಕಾಗಿ ಹೆಚ್ಚುವರಿ 60 ಎಕರೆ ಸರ್ಕಾರಿ ಭೂಮಿ ಕೇಳಿದ್ದೇನೆ. ಇದಕ್ಕೆ ಕೇಂದ್ರದಲ್ಲಿ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಮುಂದೆ 1,000 ಎಕರೆವರೆಗೆ ಬೇಕಾಗಬಹುದು ಎಂದರು.

ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆದು 20 ರಿಂದ 25 ಸಾವಿರ ಕುಟುಂಬಗಳಿಗೆ ಉದ್ಯೋಗ ಸಿಗಲಿದೆ. ಹೀಗಾಗಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೇಳಿದ್ದೇನೆ. ಆದರೆ, ಒಂದೂವರೆ ವರ್ಷವಾದರೂ ರಾಜ್ಯ ಸರ್ಕಾರ ಭೂಮಿ ನೀಡದೆ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ನಾನು ಭತ್ತ, ಅಡಿಕೆ ಅಥವಾ ಬಾಳೆ ಬೆಳೆಯುವ ಫಲವತ್ತಾದ ಭೂಮಿ ಕೊಡಿ ಎಂದು ಕೇಳುತ್ತಿಲ್ಲ. ಮಳೆ ಆಶ್ರಿತ ಬಂಜರು ಭೂಮಿ ಕೊಡಿ ಎಂದು ಕೇಳುತ್ತಿದ್ದೇನೆ. ರೈತರನ್ನು ಒಕ್ಕಲೆಬ್ಬಿಸಿ ಭೂಮಿ ಪಡೆಯುವುದಿಲ್ಲ. ರೈತರು ದೊಡ್ಡ ಮನಸ್ಸು ಮಾಡಿ ಬಂಜರು ಭೂಮಿ ನೀಡಿದರೆ 100ಕ್ಕೆ 200ರಷ್ಟು ದೊಡ್ಡ ಕಾರ್ಖಾನೆಗಳು ಬರುತ್ತವೆ ಎಂದು ಭರವಸೆ ಹಾಕಿದರು.

ಭೂಮಿಯಲ್ಲಿ ಸಿಗುವ ಅಪರೂಪದ ಖನಿಜಗಳ ರಫ್ತಿನ ಮೇಲೆ ನೆರೆಯ ಚೀನಾ ದೇಶವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಭಾರತವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂತಹ ಖನಿಜಗಳ ಉತ್ಪಾದನೆ ಮತ್ತು ಬಳಕೆಗೆ ಬೃಹತ್ ಪ್ರಮಾಣದ ಯೋಜನೆ ರೂಪಿಸುವ ಅವಕಾಶ ನನಗೆ ಸಿಕ್ಕಿತು. ಹೀಗಾಗಿ ₹7,500 ಕೋಟಿ ಯೋಜನೆ ಆರಂಭಿಸಲಾಗಿದೆ ಎಂದು ಹೇಳಿದರು.

ಆಂಧ್ರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಶೇ.50ರಿಂದ ಶೇ.80ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಸ್ಪಂದಿಸದ ಕಾರಣ ಕಂಪನಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ. ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣವನ್ನೇ ಈ ಸರ್ಕಾರ ಹಾಳು ಮಾಡುತ್ತಿದೆ ಎಂದು ವಿಷಾದಿಸಿದರು.