ಧಾರವಾಡ:
ಇದು ಕಸಪಾ 18ನೇ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಸರ್ವಾಧ್ಯಕ್ಷರಿಗೆ ತೂರಿಬಂದ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಉತ್ತರಿಸಿದ ಡಾ. ಹೇಮಾ ಪಟ್ಟಣಶೆಟ್ಟಿ, ನನ್ನ ಬದುಕಿನಲ್ಲಿ ಅನುಭವಿಸಿರುವ ಜೈವಿಕ ಹಾಗೂ ಮಾನಸಿಕ ತೊಳಲಾಟಗಳು ಮತ್ತು ಅಪವಾದಗಳೇ ಅಕ್ಷರ ರೂಪ ತಾಳಿದೆ. ಬರವಣಿಗೆ ಅಕ್ಷರಗಳ ಲೋಕದಲ್ಲಿ ವಿಹರಿಸದೆ, ಸಮಾಜದ ವಾಸ್ತವ ನೆಲೆಗಟ್ಟಿನ ಮೇಲೆ ನಿಂತು ಬರೆಯಬೇಕು. ಸಾಹಿತ್ಯ ಮನುಷ್ಯತ್ವ ಎಚ್ಚರಿಸುವ ಜತೆ ಸಾಮಾಜಿಕ ಪರಿವರ್ತನೆ ತರುವ ಶಕ್ತಿಯಾಗಿಸುವ ನಿಟ್ಟಿನಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿ, ಬದುಕಿನ ಸಂಕಟ ಮತ್ತು ನೋವು ಚಿತ್ರಿಸಿದ್ದಾಗಿ ಹೇಳಿದರು.
ಹಿಂದಿ ಅನುವಾದ ಸಾಹಿತ್ಯ ಸೆಳೆತದ ಸರಸ್ವತಿ ಭೋಸಲೆ ಪ್ರಶ್ನೆಗೆ ಉತ್ತರಿಸಿದ ಹೇಮಾ, ಭಾಷೆಯ ಜೊತೆ ಸಂಘರ್ಷ ಮಾಡುತ್ತ ಬದುಕಿನಿಂದ ದೂರ ಸರಿದಾಗ ಸೆಳೆದಿದ್ದೇ ಹಿಂದಿ ಸಾಹಿತ್ಯ ಅನುವಾದ. ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಭಾಷೆ ಬಲ್ಲ ನನಗೆ ಅನುವಾದ ಸಹಜವಾಗಿ ಬಂದಿದೆ ಎಂದರು. ಮಧುಲತಾ ಗೌಡರ ಹೇಳಿದ ಜೆ.ಪಿ. ಚಳವಳಿ ಅನುಭವದ ಬುತ್ತಿ ಬಿಚ್ಚಿಟ್ಟ ಡಾ. ಹೇಮಾ, ಸಾಹಿತ್ಯಿಕ ಸಂವೇದನೆ ಮತ್ತು ಸಾಮಾಜಿಕ ಪ್ರಜ್ಞೆಗೆ ಭದ್ರ ಬುನಾದಿ ಹಾಕಿದ್ದು 1970 ದಶಕದ ಜೆ.ಪಿ. ಚಳವಳಿ. ಅಂದಿನ ಹೋರಾಟವೇ ತಮ್ಮ ಅಕ್ಷರಗಳಲ್ಲಿ ಪ್ರತಿರೋಧದ ಶಕ್ತಿಯಾಗಿ ಹೊರಹೊಮ್ಮಿದ್ದಾಗಿ ಹೇಳಿದರು.ತುರ್ತು ಪರಿಸ್ಥಿತಿಯ ಸವಾಲು: 1975ರ ತುರ್ತು ಪರಿಸ್ಥಿತಿ ವೇಳೆ ದೇಶಾದ್ಯಂತ ಭುಗಿಲೆದ್ದಿದ್ದ ''''ಸಂಪೂರ್ಣ ಕ್ರಾಂತಿ''''ಯ ಆವಾಹನೆಗೆ ಓಗೊಟ್ಟು, ಒಬ್ಬ ಯುವತಿಯಾಗಿ ಅನುಭವಿಸಿದ ಕಷ್ಟ, ರೋಮಾಂಚನಗಳನ್ನು ವಿವರಿಸಿದರು. ಸಮಾಜದ ಅನ್ಯಾಯದ ವಿರುದ್ಧ ದನಿ ಎತ್ತುವ ಧೈರ್ಯ ಬಂದಿದ್ದೇ ಆ ದಿನಗಳಲ್ಲಿ ಎಂದು ಹೇಳಿದರು. ಸರ್ವಾಧ್ಯಕ್ಷರ ಸಂವಾದದಲ್ಲಿ ಸಾಹಿತಿಗಳಾದ ಸುನಂದಾ ಕಡಮೆ, ಮಧುಲತಾ ಗೌಡರ, ಪ್ರಮಿಳಾ ಜಕ್ಕಣ್ಣವರ, ರೂಪಾ ಜೋಶಿ, ಶಶಿಧರ ಸಾಲಿ ಅನೇಕರು ಪಾಲ್ಗೊಂಡಿದ್ದರು. ಡಾ. ಶರಣಮ್ಮ ಗೋರೆಬಾಳ ಸ್ವಾಗತಿಸಿದರು. ಡಾ. ವೀಣಾ ಬಿರಾದಾರ ನಿರೂಪಿಸಿ, ವಂದಿಸಿದರು.