ಬೋಧನೆಗೆ ಅರ್ಪಣಾ ಮನೋಭಾವ ಬಹಳ ಮುಖ್ಯವಾಗಿದ್ದು ವಿದ್ಯಾರ್ಥಿಗಳ ಕೇಂದ್ರಿತ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕು. ಗಣಿತಶಾಸ್ತ್ರ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳಿವೆ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.
ಧಾರವಾಡ:
ಯಾವುದೇ ವಿಷಯವನ್ನು ಮನ ಪೂರ್ವಕವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಸುಲಭವಾಗಿ ಅರ್ಥವಾಗುತ್ತದೆ. ಅದರಂತೆ ಗಣಿತವನ್ನು ಸರಳವಾಗಿ ಕಲಿಯಬಹುದು ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ಅಧ್ಯಯನ ವಿಭಾಗ ಮತ್ತು ಪಾವಟೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸ್ ಸಹಯೋಗದಲ್ಲಿ, ಪ್ರೊ. ಎಚ್.ಬಿ. ವಾಲಿಕಾರ ಮತ್ತು ಪ್ರೊ. ಸಿ.ಎಸ್. ಸಾಲಿಮಠ ಅವರ ದತ್ತಿ ಉಪನ್ಯಾಸ ಮತ್ತು ಪಿ.ಎಂ. ಉಷಾ ಯೋಜನೆಯ ಅನುದಾನದ ಅಡಿಯಲ್ಲಿ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಗಣಿತ ಪ್ರಾಧ್ಯಾಪಕರ ಬೋಧನಾ ವೃದ್ಧಿ ರಾಷ್ಟ್ರಮಟ್ಟದ ಕಾರ್ಯಾಗಾರದ ಸಮಾರೋಪ ಭಾಷಣ ಮಾಡಿ ಮಾತನಾಡಿದರು.
ಬೋಧನೆಗೆ ಅರ್ಪಣಾ ಮನೋಭಾವ ಬಹಳ ಮುಖ್ಯವಾಗಿದ್ದು ವಿದ್ಯಾರ್ಥಿಗಳ ಕೇಂದ್ರಿತ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕು. ಗಣಿತಶಾಸ್ತ್ರ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳಿವೆ ಎಂದ ಅವರು, ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಮುನ್ನಲೆಗೆ ಬರಲಿವೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ವೀರಣ್ಣ ಬೋಳಶೆಟ್ಟಿ ಮಾತನಾಡಿ, ಪ್ರಾಯೋಗಿಕ ಬೋಧನೆ ಮತ್ತು ಕಲಿಕೆಗೆ ಹೆಚ್ಚು ಮಹತ್ವ ನೀಡುವ ಅವಶ್ಯಕತೆ ಇದೆ. ವಿಷಯಕ್ಕೆ ಸಂಬಂಧಿಸಿದ ಕಷ್ಟಕರವಾದ ಸಂಗತಿಗಳನ್ನು ಪ್ರಾಯೋಗಿಕವಾಗಿ ಕಲಿಯುವುದು ಹೆಚ್ಚು ಸೂಕ್ತ. ಹಲವಾರು ವಿಜ್ಞಾನದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವಾಗ ಮಾಡೆಲ್ ಮೂಲಕ ಬೋಧಿಸುವುದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಗಣಿತದ ಮಾದರಿಗಳನ್ನು ತಂತ್ರಜ್ಞಾನದ ಮೂಲಕ ಸುಲಭವಾಗಿ ಕಲಿಯಲು ಸಾಧ್ಯ ಎಂದರು.
ವಿವಿಧ ಸಂಶೋಧನಾ ವಿಧಾನಗಳ ಮೂಲಕ ಗಣಿತವನ್ನು ಸರಳವಾಗಿ ಸೃಜನಶೀಲತೆಯಿಂದ ಕಲಿಸಲು ಪ್ರಯತ್ನ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಸಿ. ಶಿರಾಳಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಗಮನ ಇಟ್ಟುಕೊಂಡು ಉದ್ಯೋಗ ಅವಕಾಶ ಗಳಿಸಲು ಅವರಿಗೆ ಬೋಧನೆ ಜತೆಗೆ ಕೌಶಲ್ಯ ಬೆಳೆಸಲು ಅನೇಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಮತ್ತು ಕವಿವಿ ವ್ಯಾಪ್ತಿಯ 9 ಸ್ನಾತಕೋತ್ತರ ಗಣಿತದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸೇರಿದಂತೆ 700 ವಿದ್ಯಾರ್ಥಿಗಳು
''''ಮೆಥಮೇಟಿಕಾ'''' ತಂತ್ರಾಂಶದ ಪ್ರಾಯೋಗಿಕ ತರಬೇತಿ ಪಡೆದರು.
ಈ ಗಣಿತ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಪ್ರೊ. ಎಚ್.ಎಸ್. ರಾಮನೆ, ಪ್ರೊ. ಆಶಾ ಎಸ್.ಕೆ, ಪ್ರೊ. ಆರ್.ಎಸ್. ದ್ಯಾವನಾಳ, ಡಾ. ಬಿ. ಪರ್ವತಾಲು ಜೆಎಸ್‌ಎಸ್ ಕಾಲೇಜಿನ ಡಾ. ಶಶಿಕಾಂತ ಸೇರಿದಂತೆ ರಾಜ್ಯದ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರು ಭಾಗವಹಿಸಿದ್ದರು.
ಗಣಿತ ಪ್ರಾಧ್ಯಾಪಕರ ಬೋಧನಾ ವೃದ್ಧಿ ರಾಷ್ಟ್ರಮಟ್ಟದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.