ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜ ಮುಖಿಯಾಗಲು ರೋಗಿಗೆ ಉತ್ತಮ ಚಿಕಿತ್ಸೆ ಜೊತೆಗೆ ಸಮುದಾಯದ, ಕುಟುಂಬದ ಪ್ರೀತಿ, ವಿಶ್ವಾಸ, ಆರೈಕೆ ಬೆಂಬಲ ಅತ್ಯವಶ್ಯಕ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ಪಟ್ಟಣದ ಭೋವಿ ಕಾಲೋನಿ ಮುತ್ತು ಮಾರಮ್ಮನ ದೇವಸ್ಥಾನದ ಆವರಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ಕಿಜೋಫ್ರೀನಿಯಾ ಸಪ್ತಾಹದಲ್ಲಿ ಮಾತನಾಡಿದರು.
ಸ್ಕಿಜೋಫ್ರೀನಿಯಾ ಒಂದು ಮಾನಸಿಕ ಅಸ್ವಸ್ಥತೆಯಾಗಿದೆ. ಇದು ವ್ಯಕ್ತಿಯ ಯೋಚನೆ, ವರ್ತನೆ ಹಾಗೂ ನಡವಳಿಕೆಯ ಮೇಲೆ ಗಂಭೀರ ಪರಿಣಾಮ ಬೀರಿ ಮಾನಸಿಕ ಅಸ್ವಸ್ಥತೆ ಉಂಟುಮಾಡುತ್ತದೆ ಎಂದರು.ಇತ್ತೀಚಿನ ಆಧುನಿಕ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಉತ್ತಮ ನಿದ್ರೆ, ನಿಯಮಿತ ವ್ಯಾಯಾಮ, ಧ್ಯಾನ ಮಾಡುವುದು, ಹೊಸ ಕೌಶಲ್ಯಗಳನ್ನು ಕಲಿಯುವುದು, ಆರೋಗ್ಯಕರ ಆಹಾರ ಸೇವನೆ, ಪ್ರಕೃತಿಯೊಂದಿಗೆ ಬೆರೆಯುವ ಮೂಲಕ ಜೊತೆಗೆ ಸಮಯ ಪಾಲನೆ ಮತ್ತು ಮಾನಸಿಕ ಒತ್ತಡವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ. ಮಂಗಳ ಮಾತನಾಡಿ, ಯಾವುದೇ ಮಾನಸಿಕ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ಉಚಿತ ಚಿಕಿತ್ಸೆ, ಸಲಹೆ ನೀಡಲಾಗುತ್ತಿದೆ. ಸ್ಕೀಜೋಫ್ರೀನಿಯಾ ಕಾಯಿಲೆ ಬಗ್ಗೆ ಆತಂಕ ಬೇಡ ಸೂಕ್ತ ಚಿಕಿತ್ಸೆಯಿಂದ ಸಹಜ ಜೀವನ ಪಡೆಯಬಹುದಾಗಿದು. ಜೊತೆಗೆ ಶುಲ್ಕ ರಹಿತ ಸಂಖ್ಯೆ14416 ಟೆಲಿ ಮನಸ್‌ಗೆ ಕರೆ ಮಾಡಿ ಸೂಕ್ತ, ಆಪ್ತ ಸಮಾಲೋಚನೆ ಪಡೆಯಬಹುದು ಎಂದರು.ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಅಕ್ಷತಾ, ಆಶಾ ಕಾರ್ಯಕರ್ತೆ ಅಶ್ವಿನಿ ಹಾಗೂ ಗರ್ಭಿಣಿಯರು, ಮಕ್ಕಳ ತಾಯಂದಿರು ಸೇರಿದಂತೆ ಇತರರು ಇದ್ದರು.