ಸಿ.ಎಂ. ಜೋಶಿ
ಒಂದು ವರ್ಷದಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿಯೇ ಸಾಗುತ್ತಿದೆ. ಇದರಿಂದ ಸವಾರರು, ಸಾರ್ವಜನಿಕರ ನಿತ್ಯ ವ್ಯವಹಾರಗಳಿಗೆ ಅಲೆದಾಡಲು ಅಡೆತಡೆ ಉಂಟಾಗುತ್ತಿದೆ. ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಸರಿಯಾದ ಮಾರ್ಗಸೂಚಿ ಫಲಕ ಹಾಕದೇ ಕಾಮಗಾರಿ ಮಾಡುತ್ತಿರುವುದು ಜನರಿಗೆ ಕಿರಿಕಿರಿಯಾಗಿದೆ.
ಪಟ್ಟಣದ ಮಧ್ಯ ಹಾಯ್ದು ಹೋಗುವ ಸಂಕೇಶ್ವರ-ಸಂಗಮ ರಸ್ತೆ ಒಂದು ವರ್ಷದಿಂದ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಯಾವುದೇ ನಿರ್ದಿಷ್ಟ ಕಾರ್ಯಯೋಜನೆ ಇಲ್ಲ. ಕಾಮಗಾರಿ ವಿಳಂಬವಾಗುತ್ತಲೇ ಇದೆ. ಇನ್ನೇನು ಕಾಮಗಾರಿ ಆರಂಭವಾಯ್ತು ಎಂದು ಸಮಾಧಾನಪಟ್ಟುಕೊಳ್ಳುವಷ್ಟರಲ್ಲೇ ವಾರದಲ್ಲಿ ಮತ್ತೆ 15 ದಿನ ಕಾಮಗಾರಿ ಸ್ಥಗಿತವಾಗುತ್ತದೆ. ಇದರಿಂದ ಪಟ್ಟಣದ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಭಂಡಾರಿ ಸರ್ಕಲ್ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕುಸಿತ ಕಂಡಿದೆ. ಸಹಜವಾಗಿ ವ್ಯಾಪಾರಸ್ಥರು ಕೂಡ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ರಸ್ತೆ ನಿರ್ಮಿಸುವ ನೆಪದಲ್ಲಿ ಅಂಗಡಿಗಳ ಮುಂದಿನ ಭಾಗ ತಗ್ಗು ಪ್ರದೇಶವಾಗಿದೆ. ಮಳೆ ಆಗಿದ್ದರಿಂದ ನೀರು ನಿಂತಿದೆ. ಗ್ರಾಹಕರು ಈ ಅಂಗಡಿಗಳಿಗೆ ವ್ಯಾಪಾರಕ್ಕೆ ಬರಲು ಪರದಾಡುವಂತಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಿದರೆ ವ್ಯಾಪಾರ ಹಾಗೂ ಸಂಚಾರಕ್ಕೆ ಅನುಕೂಲವಾಗುತ್ತದೆ. ಆದರೆ, ಗುತ್ತಿಗೆದಾರರು ಒಂದು ವರ್ಷದಿಂದ ವಿಳಂಬ ಮಾಡುತ್ತಲೇ ಇದ್ದಾರೆ.
ಎರಡು-ಮೂರು ತಿಂಗಳ ಹಿಂದೆಯೇ ಬಾಗಲಕೋಟೆ ರಸ್ತೆ ಹಾಗೂ ಕಮತಗಿ ರಸ್ತೆ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದಾಗ ಅಂಗಡಿಕಾರರು ಅಂಗಡಿ ಮುಂದಿನ ಶೆಡ್, ಅಂಗಡಿಯ ಮೆಟ್ಟಿಲುಗಳನ್ನು ತೆಗೆಸಿದರು. ಆದರೆ ವರ್ಷವಾದರೂ ಕಾಮಗಾರಿ ಮುಗಿಯುತ್ತಿಲ್ಲ. ಹೀಗಾಗಿ ಬಾಗಲಕೋಟೆ ರಸ್ತೆಯ ವ್ಯಾಪಾರಸ್ಥರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಮತಗಿ ರಸ್ತೆ ಕಾಮಗಾರಿ ಆರಂಭಿಸಿ ಬಾಗಲಕೋಟೆ ಮಾರ್ಗದ ರಸ್ತೆ ಸ್ಥಗಿತ ಮಾಡಿದ್ದು, ವ್ಯಾಪಾರಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಇಲ್ಲಿನ ವ್ಯಾಪಾರಸ್ಥರು, ಸಾವರ್ಜನಿಕರು, ಟಂಟಂ, ಗೂಡ್ಸ್ ವಾಹನ ಚಾಲಕರು, ವಿವಿಧ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಅವೈಜ್ಞಾನಿಕವಾದ ಈ ರಸ್ತೆ ಕಾಮಗಾರಿಗೆ ಬೇಸತ್ತು ಪ್ರತಿಭಟನೆ ಮಾಡುವ ಚಿಂತನೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಈಗಲೇ ಎಚ್ಚೆತ್ತುಕೊಂಡು ಅನಾನುಕೂಲವಾಗುವ ರೀತಿಯಲ್ಲಿ ಮಾಮಗಾರಿ ಆದಷ್ಟು ಬೇಗ ಮಾಡಿ ಮುಗಿಸಬೇಕಿದೆಂದು ಸಾರ್ವಜನಿಕರ ಆಗ್ರಹವಾಗಿದೆ.
- ಎಂ.ಕೆ.ಮಕಾನದಾರ, ಕಿರಿಯ ಅಭಿಯಂತರ, ಲೋಕೋಪಯೋಗಿ ಇಲಾಖೆ