ಪಶು, ಪಕ್ಷಿಗಳ ಒಡನಾಟದಿಂದ ಮಾನಸಿಕ ನೆಮ್ಮದಿ: ಎಚ್.ಡಿ. ತಮ್ಮಯ್ಯ

KannadaprabhaNewsNetwork | Published : Jan 28, 2025 12:48 AM

ಸಾರಾಂಶ

ಚಿಕ್ಕಮಗಳೂರು, ಪಶು, ಪಕ್ಷಿಗಳೊಂದಿಗಿನ ಒಡನಾಟ ಮಾನಸಿಕ ನೆಮ್ಮದಿ ನೀಡುತ್ತದೆ. ಪ್ರತಿಯೊಬ್ಬರು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ ಅವುಗಳನ್ನು ಸಂರಕ್ಷಿಸಬೇಕು ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ಚೈತ್ರೋತ್ಸವದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಶು, ಪಕ್ಷಿಗಳೊಂದಿಗಿನ ಒಡನಾಟ ಮಾನಸಿಕ ನೆಮ್ಮದಿ ನೀಡುತ್ತದೆ. ಪ್ರತಿಯೊಬ್ಬರು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ ಅವುಗಳನ್ನು ಸಂರಕ್ಷಿಸಬೇಕು ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದಕೀಯ ಸಂಘ ಹಾಗೂ ಚಿಕ್ಕಮಗಳೂರು ಕೆನಲ್ ಕ್ಲಬ್ ನಿಂದ ಚೈತ್ರೋತ್ಸವದ ಅಂಗವಾಗಿ ಸೋಮವಾರ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಭೂಮಿ ಪ್ರತಿಯೊಂದು ಜೀವಿಗೂ ಆಶ್ರಯ ತಾಣವಾಗಿದೆ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ಆದರೆ, ಮನುಷ್ಯನ ದುರಾಸೆ ಹಾಗೂ ಸ್ವಾರ್ಥದಿಂದ ಹಲವಾರು ಜೀವಿಗಳು ಅವನತಿ ಹೊಂದುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಪ್ರೀತಿಸಿ ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಮನುಷ್ಯರಿಗಿಂತ ಪ್ರಾಣಿಗಳ ಮೇಲಿನ ಒಲವು ಹೆಚ್ಚುತ್ತಿದೆ. ಇಂದಿನ ಯುವ ಜನತೆಗೆ ಶ್ವಾನದಲ್ಲಿರುವ ವಿಶೇಷ ತಳಿಗಳನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಶ್ವಾನ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದ ಮೂಲಕ ಶ್ವಾನಗಳ ವಿವಿಧ ತಳಿಗಳನ್ನು ಪರಿಚಯಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದ ಅವರು, ಪ್ರತಿಯೊಬ್ಬರು ಪ್ರಾಣಿ ಸಂರಕ್ಷಣೆಗೆ ಒಂದಾಗಿ ಎಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ರಾಷ್ಟ್ರೀಯ ಹಬ್ಬಗಳ ಮೇಲಿನ ಒಲವು ಕ್ಷೀಣಿಸುತ್ತಿದೆ. ಪ್ರತಿಯೊಬ್ಬರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಹಿನ್ನೆಲೆಯನ್ನು ಅರಿತು ಕೊಳ್ಳಬೇಕು. ಕೇವಲ ಅಧಿಕಾರಿಗಳು ಜನ ಪ್ರತಿನಿಧಿಗಳ ಶ್ರಮದಿಂದ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ. ಇದರಲ್ಲಿ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆ ಬಹುಮುಖ್ಯವಾಗಿದೆ. ಆದ್ದರಿಂದ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಚೈತ್ರೋತ್ಸವ ದಂತಹ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆಯಲು ಸಹಕಾರಿಯಾಗಿವೆ. ಪ್ರತಿಯೊಬ್ಬ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಶ್ವಾನ ಉತ್ಸವದಲ್ಲಿ ಪೊಲೀಸ್ ಶ್ವಾನಗಳ ಪ್ರದರ್ಶನ ವಿಶೇಷತೆಯಿಂದ ಕೂಡಿದ್ದು, ಪ್ರೇಕ್ಷಕರ ಗಮನ ಸೆಳೆದಿತ್ತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್ ಕುಮಾರ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ಕೆನಲ್ ಕ್ಲಬ್ ಅಧ್ಯಕ್ಷ ಕವೀಶ್ ಕುಮಾರ್, ನಳಿನಾ ಡೀಸಾ ಇತರರು ಇದ್ದರು.

27 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ವಾನ ಪ್ರದರ್ಶನವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ಜಿಪಂ ಸಿಇಒ ಕೀರ್ತನಾ, ಸುಜಾತಾ ಶಿವಕುಮಾರ್‌, ಡಾ. ಮೋಹನ್‌ಕುಮಾರ್‌, ಪೂರ್ಣಿಮಾ ಇದ್ದರು.

Share this article