ವಿರಾಜಪೇಟೆ: ಮಾನಸಿಕ ಅಸ್ವಸ್ಥ ವ್ಯಕ್ತಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ

KannadaprabhaNewsNetwork |  
Published : Oct 27, 2024, 02:20 AM IST
ಮಾನಸಿಕ ಅಸ್ವಸ್ಥನಿಂದ ದಾಂದಲೆ: ನಾಗರಿಕರಿಂದ ದೂರು: ಪುರಸಭೆ ಮತ್ತು ಪೊಲೀಸು ಇಲಾಖೆಯಿಂದ ಅಸ್ವಸ್ಥನಿಗೆ ನಗರದಿಂದ ಮುಕ್ತಿ: | Kannada Prabha

ಸಾರಾಂಶ

ಮಾನಸಿಕ ಅಸ್ವಸ್ಥನೊಬ್ಬ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿದ್ದು, ಈತನಿಂದ ಬೇಸತ್ತ ಸಾರ್ವಜನಿಕರು ಪುರಸಭೆಯ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ನಗರದಲ್ಲಿ ತಿಂಗಳಿನಿಂದ ಓಡಾಡುತ್ತಿದ್ದ ಮಾನಸಿಕ ಆಸ್ವಸ್ಥನೊಬ್ಬ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದು, ಈತನಿಂದ ಬೇಸತ್ತ ಸಾರ್ವಜನಿಕರು ಪುರಸಭೆಯ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದರು. ಪುರಸಭೆಯು ಪೊಲೀಸು ಇಲಾಖೆಯ ಸಹಯೋಗದೊಂದಿಗೆ ಆತನನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿತು.

ವಿರಾಜಪೇಟೆ ನಗರದಲ್ಲಿ ತಿಂಗಳ ಹಿಂದೆ ಮಾನಸಿಕ ಆಸ್ವಸ್ಥನೊಬ್ಬ ಓಡಾಡುತ್ತ, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದು, ಅಂಗಡಿಗಳಿಗೆ ನುಗ್ಗುವುದು ಮಾಡುತ್ತ ತೀವ್ರ ಕಿರಿಕಿರಿ ಮಾಡುತ್ತಿದ್ದ. ವಿರಾಜಪೇಟೆ ಪುರಸಭೆ ಮತ್ತು ಪೊಲೀಸ್‌ ಇಲಾಖೆಯ ಜಂಟಿ ಕಾರ್ಯಾಚರಣೆಯೊಂದಿಗೆ ಸೆರೆ ಹಿಡಿದು ಪುನರ್ ವಸತಿ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.

ಮಾನಸಿಕ ಆಸ್ವಸ್ಥ ವ್ಯಕ್ತಿಯು ದ್ವಿಚಕ್ರ ವಾಹನವೊಂದನ್ನು ಮಾಲಕನ ಅರಿವಿಗೆ ಬಾರದಂತೆ ಎತ್ತಂಗಡಿ ಮಾಡಿ ಅಜ್ಞಾತ ಸ್ಥಳದಲ್ಲಿರಿಸಿ ಹೋಗಿದ್ದ. ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಬಳಿಯ ಹೋಟೆಲ್‌ವೊಂದರಲ್ಲಿ ಏಕಾಏಕಿಯಾಗಿ ಒಳನುಗ್ಗಿ ಇರಿಸಲಾಗಿದ್ದ ಮೈಕ್ರೋ ಓವನ್ ಕಸಿದುಕೊಂಡು ಹೋಗುತ್ತಿದ್ದ. ಕೂಡಲೇ ಸಿಬ್ಬಂದಿ ಆತನಿಂದ ಓವನ್ ಮರಳಿ ಪಡೆದಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ವೇಳೆ ಆಟೋ ಚಾಲಕರು ತಡೆದಿದ್ದರು. ಈತನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು ಎಂದು ಹೊಟೇಲ್‌ ಮಾಲಕ ಕೆ.ಎಸ್‌. ಶಾಜಿ ಹೇಳುತ್ತಾರೆ.

ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದೆವು. ತಕ್ಷಣವೇ ಕಾರ್ಯಪ್ರವರ್ತರಾಗಿ ಮಾನಸಿಕ ಅಸ್ವಸ್ಥನನ್ನು ಹಿಡಿದು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆತನನ್ನು ಮೈಸೂರು ನಿರಾಶ್ರಿತರ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹೇಳಿದರು.

ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಪ್ರಮೋದ್, ಪುರಸಭೆಯ ಸದಸ್ಯರಾದ ಎಸ್.ಎಚ್. ಮತೀನ್, ಡಿ.ಪಿ. ರಾಜೇಶ್, ಪದ್ಮನಾಭ, ಪುರಸಭೆಯ ಪ್ರಭಾರ ಅರೋಗ್ಯ ಅಧಿಕಾರಿ ಕೋಮಲ ಹಾಗೂ ಪುರಸಭೆಯ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ