ವಿಕಲಚೇತನರ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳ ಗೈರಿಗೆ ಆಕ್ರೋಶ । ಬೇಡಿಕೆ ಈಡೇರಿಕೆಗೆ ಆಗ್ರಹ
ಶ್ರವಣಮಾಂದ್ಯರ ಇಂತಹ ಕಾರ್ಯಕ್ರಮಕ್ಕೆ ಯಾವ ರಾಜಕಾರಣಿ, ಸಂಬಂಧಪಟ್ಟ ಅಧಿಕಾರಿಗಳು ಆಗಮಿಸುವುದಿಲ್ಲ. ಸಮಾಜದಲ್ಲಿ ನಾವು ಯಾರಿಗೂ ಬೇಡವೇ. ಶ್ರವಣದೋಷವುಳ್ಳವರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಯ ತಾಲೂಕಿನಲ್ಲಿರುವ ಕಿವುಡರು, ಬುದ್ದಿ ಮಾಂದ್ಯರು ಡಿ.೧೭ಕ್ಕೆ ಬೆಳಗಾವಿಗೆ ಬಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಚ್. ಶಂಕರ್ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಜಿಲ್ಲಾ ಶ್ರವಣಮಾಂದ್ಯರ ಸಂಘದಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಮುಖವಾಗಿ ಶ್ರವಣಮಾಂದ್ಯರ ಇಂತಹ ಕಾರ್ಯಕ್ರಮಕ್ಕೆ ಯಾವ ರಾಜಕಾರಣಿಗಳು ಇಲ್ಲ. ನಾವು ನಮ್ಮ ಖುಷಿಗೆ ಇಂತಹ ಕಾರ್ಯಕ್ರಮ ಮಾಡುತ್ತೇವೆ. ಆದರೆ ಇಂತಹ ಹೀನ ಸ್ಥಿತಿಗೆ ಬಂದಿದ್ದೇವೆ ಎಂದರೆ ನನಗೆ ನೋವಾಗುತ್ತದೆ. ಸಮಾಜದಲ್ಲಿ ನಾವು ಯಾರಿಗೂ ಬೇಡವೇ? ಸಮಾಜದಲ್ಲಿ ಕಿವುಡರಿಗೆ ಮಲತಾಯಿ ದೋರಣೆ ಏಕೆ ಎಂದು ಪ್ರಶ್ನೆ ಮಾಡಿದರು.ಕಿವುಡರಾಗಿ, ಮೂಕರಾಗಿ ನಾವು ಪ್ರಪಂಚದಲ್ಲಿ ಹುಟ್ಟಿರುವುದೇ ತಪ್ಪಾ! ನಮ್ಮ ಬೇಡಿಕೆಗಳಿಗಾಗಿ ಕಳೆದ ೧೫ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಸಂಘಟಾತ್ಮಕವಾಗಿ ಸಂಘವನ್ನು ಸಂಘಟಿಸಿದ್ದೇವೆ. ನಮಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದ್ದೇವೆ. ನಾವು ಈ ದೇಶದ ಪ್ರಜೆಗಳು ಅಲ್ಲವೇ? ಯಾವ ರೀತಿ ಹೋರಾಟ ಮಾಡಬೇಕು? ನಮ್ಮ ಪ್ರಾಣ ಕೊಡಬೇಕಾ! ಮೈಮೇಲೆ ಸೀಮೆ ಎಣ್ಣೆ ಹಾಕಿಕೊಳ್ಳಬೇಕಾ, ಹುಚ್ಚರಂತೆ ಮೈ ಮೇಲಿನ ಬಟ್ಟೆ ಬಿಚ್ಚಿ ಭಿಕ್ಷೆ ಬೇಡ ಬೇಕಾ, ಎಷ್ಟು ಬಾರಿ ಹೋರಾಟ ಮಾಡಬೇಕು. ಕಿವುಡರು ಕೂಡ ದೇಶದ ಪ್ರಜೆ ಎಂದು ಕನ್ಸಿಡರ್ ಮಾಡುವುದು ಹೇಗೆ? ಕಿವುಡರು ಕೂಡ ಮನುಷ್ಯರಲ್ಲವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲಾ ಕಿವುಡರು, ಬುದ್ದಿಮಾಂದ್ಯರು ಇದೇ ತಿಂಗಳು ೧೭ ರಂದು ಬೆಳಗಾವಿಗೆ ಬಂದು ನಮ್ಮ ಹೋರಾಟಕ್ಕೆ ಕೈಜೋಡಿಸಿ. ಬೇಡಿಕೆ ಈಡೇರುವವರೆಗೂ ಅಲ್ಲೇ ಉಪವಾಸ ಮಾಡಬೇಕು ಎಂದು ಕರೆ ಕೊಟ್ಟರು.ಪ್ರಮುಖ ಬೇಡಿಕೆಗಳೆಂದರೆ ಉದ್ಯೋಗಾವಕಾಗಳು, ಸರ್ಕಾರದೊಳಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವರ್ಗಗಳ ಅಡಿಯಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲು ನಿರ್ದಿಷ್ಟ ಇಲಾಖೆಗಳಾದ ಆರೋಗ್ಯ ಇಲಾಖೆ, ಕರ್ನಾಟಕ ಪೌರಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ ಇತ್ಯಾದಿ ಇಲಾಖೆಗಳಲ್ಲಿ ಕಿವುಡ ಸಮುದಾಯದವರಿಗೆ ಪರೀಕ್ಷೆಗಳ ಬದಲಾಗಿ ಸಂದರ್ಶನಗಳನ್ನು ನಡೆಸುವಂತೆ ವಿನಂತಿಸುತ್ತಿದ್ದೇವೆ. ಉಚಿತ ಬಸ್ ಪ್ರಯಾಣ ವ್ಯವಸ್ಥೆ, ಭತ್ಯೆ, ಕಿವುಡರಿಗೆ ೧೦೦ ಕಿ.ಮೀ. ವ್ಯಾಪ್ತಿಯ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸಬೇಕಾಗಿದೆ. ಕಿವುಡರಿಗೆ ಪಿಂಚಣಿ ಹೆಚ್ಚಳವನ್ನು ಅವರ ಉದ್ಯೋಗ ಸ್ಥಿತಿಯನ್ನು ಲೆಕ್ಕಿಸದೆ ಮಾಸಿಕ ಪಿಂಚಣಿಯನ್ನು ೧೪೦೦ ರು. ನಿಂದ ೫೦೦೦ ರು.ಗೆ ಹೆಚ್ಚಿಸುವುದು, ಸಂಕೇತ ಭಾಷೆ ಮತ್ತು ಲಿಪ್ರೇಡಿಂಗ್ ಶಿಕ್ಷಣ, ಕಿವುಡ ಕ್ರೀಡಾಪಟುಗಳಿಗೆ ಅನುದಾನ, ಕಿವುಡ ದಂಪತಿಗೆ ಕಲ್ಯಾಣ ಅನುದಾನ, ಕಿವುಡರ ಸಂಘದ ಕಚೇರಿಗೆ ಸ್ಥಳಾವಕಾಶ, ಜಿಲ್ಲಾ ಆಸ್ಪತ್ರೆಗಳಲ್ಲಿ ಯಂತ್ರಗಳನ್ನು ಒದಗಿಸುವುದು ಇತರೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುವುದಾಗಿ ಹೇಳಿದರು.
ಶ್ರವಣಮಾಂದ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ತಮ್ಮ ನೃತ್ಯದ ಮೂಲಕ ಮಕ್ಕಳು ಪ್ರೇಕ್ಷಕರ ಗಮನ ಸೆಳೆದರು.ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿ ಅಧ್ಯಕ್ಷ ವಿ. ಕುಮಾರ್, ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ದೇವರಾಜು, ಜಿ.ಎಸ್.ನವೀನ್ ಕುಮಾರ್, ಶ್ರವಣಮಾಂದ್ಯರ ಸಂಘದ ಜಿಲ್ಲಾಧ್ಯಕ್ಷ ದಾದಾಫೀರ್, ಪ್ರಧಾನ ಕಾರ್ಯದರ್ಶಿ ಎಸ್.ಅವಿನಾಶ್, ಸತೀಶ್, ಲೋಕೇಶ್ ಇತರರು ಇದ್ದರು.