ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಇತ್ತೀಚೆಗೆ ಮೆಕ್ಕೆಜೋಳ, ಸಜ್ಜಿ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಕೈಸುಟ್ಟುಕೊಂಡಿರುವ ಅನೇಕ ರೈತರ ನಡುವೆ ತಾಲೂಕಿನ ಬೆನಕನಾಳ ಗ್ರಾಮದ ಭೀಮಪ್ಪ ಮುಗುಳಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೆರಾಬುಲ್ ಗುಲಾಬಿ ಹೂ ಬೆಳೆದು, ನಷ್ಟವಿಲ್ಲದೆ ಜೀವನಕ್ಕೆ ಬೇಕಾದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಮಾದರಿ ರೈತನಾಗಿದ್ದಾನೆ.
ಈ ಹೂ ಮಾರಾಟದಿಂದ ಈತನಿಗೆ ಪ್ರತಿ ತಿಂಗಳಿಗೆ ₹18,000ದಿಂದ ₹20,000ವರೆಗೆ ನಿಶ್ಚಿತ ಆದಾಯ ಖಾತರಿಯಾಗಿದೆ. ಆಶಾದಾಯಕ ಬದುಕು ಸೃಷ್ಟಿ ಮಾಡಿದೆ ಎನ್ನಬಹುದು.ನರೇಗಾ ಯೋಜನೆಯಡಿ ಹೂವು, ಹಣ್ಣು, ತರಕಾರಿ ಬೆಳೆಯಲು ಗ್ರಾಪಂ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂಬುದನ್ನರಿತ ರೈತ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಈ ಯೋಜನೆಯ ಲಾಭ ಪಡೆದು ಗುಲಾಬಿ ಹೂಗಳನ್ನು ಬೆಳೆಯಲು ಮುಂದಾಗಿದ್ದಾರೆ.
ಕುಷ್ಟಗಿ, ಕನಕಗಿರಿ ಭಾಗದ ರೈತರಿಗೆ ಗುಲಾಬಿ ಸಸಿಗಳನ್ನು ಮಾರಾಟ ಮಾಡುವ ಮೂಲಕ ಅದರಿಂದಲೂ ಈ ರೈತ ಲಾಭ ಗಳಿಸುತ್ತಿದ್ದಾರೆ.
ಪ್ರತಿದಿನ ಸುಮಾರು 12-14 ಕೆಜಿಯಷ್ಟು ಹೂಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲ ಸಮಯದಲ್ಲಿ ಹೂ ಕಟಾವು ಮಾಡಿ ವ್ಯಾಪಾರಸ್ಥರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಗಜೇಂದ್ರಗಡ, ಇಲಕಲ್, ಹೊಸಪೇಟೆ, ಕುಷ್ಟಗಿ ಸೇರಿದ ಪ್ರಮುಖ ಮಾರುಕಟ್ಟೆಗೆ ಹೂಗಳನ್ನು ಸಾಗಿಸಲಾಗುತ್ತದೆ.
ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಭಿನ್ನವಾಗಿ ಯೋಚನೆ ಮಾಡಬೇಕು. ನರೇಗಾ ಯೋಜನೆ ಸದುಪಯೋಗ ಪಡೆದು ರೈತ ಭೀಮಪ್ಪ ಮುಗಳಿ ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ. ತೋಟಗಾರಿಕೆ ಇಲಾಖೆ ಯಾವುದೇ ಸಮಯದಲ್ಲಿ ರೈತರಿಗೆ ಸಹಾಯ ಮಾಡಲು ಸನ್ನದ್ಧವಾಗಿರುತ್ತದೆ. ಕಡಿಮೆ ಖರ್ಚು ಅಧಿಕ ಲಾಭ ಎನ್ನುವುದನ್ನು ಮೇರಾಬುಲ್ ರೋಜ್ ಕೃಷಿ ಸಾಕ್ಷಿಯಾಗಿದೆ ಎಂದು ಕುಷ್ಟಗಿ ತಾಪಂ ಇಒ ನಿಂಗಪ್ಪ ಮಸಳಿ ಹೇಳಿದ್ದಾರೆ.