ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಕಡಿಮೆ ಮಕ್ಕಳಿರುವ ಶಾಲೆಗಳ ವಿಲೀನ: ಸಚಿವ ಮಧು ಬಂಗಾರಪ್ಪ

KannadaprabhaNewsNetwork | Published : Nov 26, 2024 12:46 AM

ಸಾರಾಂಶ

ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯು ೧೧ ತಾಲೂಕು ವ್ಯಾಪ್ತಿಯನ್ನು ಹೊಂದಿದ್ದು, ಶಿಕ್ಷಣದ ಪ್ರಗತಿಯೂ ಉತ್ತಮವಾಗಿದೆ.

ಶಿರಸಿ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಮಲೆನಾಡು ಭಾಗಗಳಲ್ಲಿ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳನ್ನು ವಿಲೀನಗೊಳಿಸಿ, ಆ ಮಕ್ಕಳಿಗೆ ಅನುಕೂಲವಾಗಲು ವಾಹನ ವ್ಯವಸ್ಥೆ ನೀಡಿ, ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ನಗರದ ಆಡಳಿತ ಸೌಧದಲ್ಲಿ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲಾ ಪ್ರಗತಿ ಪ್ರರಿಶೀಲನಾ ಸಭೆ ನಡೆಸಿ, ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಕಡಿಮೆ ಸಂಖ್ಯೆಯಿರುವ ಶಾಲೆಯ ವಿದ್ಯಾರ್ಥಿಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಸೇರಿಸುವುದರಿಂದ ಶಿಕ್ಷಕರ ಕೊರತೆ ಸಮಸ್ಯೆಯೂ ಬಗೆಹರಿಯಲಿದ್ದು, ಪ್ರಾಯೋಗಿಕವಾಗಿ ಜಾರಿಗೊಳಿಸಲು ಇಲಾಖೆಯಿಂದ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದರು.ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯು ೧೧ ತಾಲೂಕು ವ್ಯಾಪ್ತಿಯನ್ನು ಹೊಂದಿದ್ದು, ಶಿಕ್ಷಣದ ಪ್ರಗತಿಯೂ ಉತ್ತಮವಾಗಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಗೆ ೩ ಪರೀಕ್ಷೆ ನಡೆಸಿ, ಸುಮಾರು ೬೦ ಸಾವಿರ ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಕಲಿಕೆಗೆ ಅವಕಾಶ ನೀಡಿದ್ದೇವೆ. ಇದರ ಕುರಿತು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

ಶಿಕ್ಷಣ ಇಲಾಖೆಯ ಯೋಜನೆಯಲ್ಲಿ ಹಲವಾರು ನ್ಯೂನತೆಗಳಿದ್ದು, ಅದನ್ನು ಸರಿಪಡಿಸುವ ಕೆಲಸ ಹಂತ- ಹಂತವಾಗಿ ಮಾಡಲಾಗುತ್ತಿದೆ. ಶಿಕ್ಷಕರ ಕೊರತೆ ನೀಗಿಸಲು ೧೩,೫೦೦ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಕಲ್ಯಾಣ ಕರ್ನಾಟಕಕ್ಕೆ ೫,೮೦೦ ಶಿಕ್ಷಕರ ನೇಮಕಾತಿ ಆದೇಶ ಸದ್ಯದಲ್ಲಿ ಹೊರಬೀಳಲಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ೧೦ರಿಂದ ೧೫ ಸಾವಿರ ದೈಹಿಕ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ಸೂಚಿಸುವಂತೆ ಮುಖ್ಯಮಂತ್ರಿ ಬಳಿ ವಿನಂತಿಸಲಾಗಿದೆ.

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸಿಇಟಿ, ನೀಟ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದ್ದು, ಶೂ, ಸಮವಸ್ತ್ರ, ಮೊಟ್ಟೆ, ಚಿಕ್ಕಿ, ಹಾಲು, ರಾಗಿ ಮಾಲ್ಟ್‌ ನೀಡುವ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಮುಂದೆ ಬರಬೇಕೆನ್ನುವ ಉದ್ದೇಶದಿಂದ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಶಾಲೆಗಳಿಗೆ ಹಾನಿಯಾಗಿದ್ದು, ದುರಸ್ತಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ. ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.ವಿಶೇಷಚೇತನ ಮಕ್ಕಳ ಶಾಲೆಗೆ ಸರ್ಕಾರದಿಂದ ಮಧ್ಯಾಹ್ನದ ಊಟ ದೊರೆಯುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಶೇಷಚೇತನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನಮ್ಮ ಇಲಾಖೆಯಿಂದ ನೀಡಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರ ಜತೆಯೂ ಚರ್ಚಿಸಿ, ಆ ಇಲಾಖೆಯಿಂದಾದರೂ ನೀಡಲು ವಿಶೇಷ ಕ್ರಮ ವಹಿಸುವುದರ ಜತೆ ಅಲ್ಲಿ ನ್ಯೂನತೆಗಳಿದ್ದರೆ ನಮ್ಮ ಇಲಾಖೆಯಿಂದ ನೀಡುತ್ತೇವೆ ಎಂದರು.ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಶಿಕ್ಷಣ ಇಲಾಖೆ ಜಂಟಿ ಆಯುಕ್ತೆ ಜಯಶ್ರೀ, ಡಿಡಿಪಿಐ ಬಸವರಾಜ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮತ್ತಿತರರು ಇದ್ದರು.

Share this article