ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಆಗ್ರಹ

KannadaprabhaNewsNetwork |  
Published : Mar 23, 2025, 01:32 AM IST
23ಕೆಡಿವಿಜಿ13, 14-ನಾಡದ್ರೋಹಿ ಎಂಇಎಸ್, ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ದಾವಣಗೆರೆಯಲ್ಲಿ ಶನಿವಾರ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ, ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಹೆಣ್ಣು ಮಗಳಿಂದ ಸುಳ್ಳು ಪೋಕ್ಸೋ ಕೇಸ್ ದಾಖಲಿಸಿದ್ದು ಸೇರಿದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಿ, ಪುಂಡರನ್ನು ಮಟ್ಟ ಹಾಕುವಂತೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ, ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಹೆಣ್ಣು ಮಗಳಿಂದ ಸುಳ್ಳು ಪೋಕ್ಸೋ ಕೇಸ್ ದಾಖಲಿಸಿದ್ದು ಸೇರಿದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಿ, ಪುಂಡರನ್ನು ಮಟ್ಟ ಹಾಕುವಂತೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಜಯದೇವ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಎಸಿ ಕಚೇರಿವರೆಗೆ ಎಂಇಎಸ್ ಮತ್ತದರ ಪುಂಡರ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿ, ನಂತರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಬೆಳಗಾವಿಯಲ್ಲಿ ಈಚೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ಮಾಡಿ, ಹೆಣ್ಣು ಮಗಳಿಂದ ಸುಳ್ಳು ಪೋಕ್ಸೋ ಕೇಸ್ ದಾಖಲಿಸಿ, ಕಡೆಗೆ ಬಾಲಕಿಯ ಹೆತ್ತವರು ಕೇಸ್ ವಾಪಾಸ್ಸು ಪಡೆದರು. ಕನ್ನಡ ಮಾತನಾಡುವಂತೆ ಹೇಳಿದ ನಿರ್ವಾಹಕನ ವಿರುದ್ಧವೇ ತಿರುಗಿ ಬಿದ್ದು, ಮರಾಠಿ ಮಾತನಾಡುವಂತೆ ಬಲವಂತ ಮಾಡಿ, ಕನ್ನಡಿಗರಿಗೆ ಅವಮಾನಿಸುವ ಕೆಲಸ ಎಂಇಎಸ್ ಸಂಘಟನೆಯ ಕೆಲ ಭಾಷಾಂಧರು ಮಾಡುತ್ತಿದ್ದಾದರೆ. ಇಂತಹ ಪುಂಡಾಟಿಕೆ, ಉದ್ಧಟತನವನ್ನು ಪ್ರತಿ ಸಲವೂ ತೋರುತ್ತಿರುವುದು ಅಕ್ಷಮ್ಯ ಎಂದು ಆಕ್ಷೇಪಿಸಿದರು.

ಎಂಇಎಸ್ ಮತ್ತದರ ಪುಂಡರ ವಿರುದ್ಧ ಓಟಿಗೋಸ್ಕರ ಯಾವುದೇ ರಾಜಕೀಯ ಪಕ್ಷವಾಗಲೀ, ರಾಜಕಾರಣಿಗಳಾಗಲೀ ಮಾತನಾಡದಿರುವುದು ವಿಪರ್ಯಾಸದ ಸಂಗತಿ. ಈ ಬಗ್ಗೆ ನಮಗು ಸಹ ವಿಷಾದವೆನಿಸುತ್ತದೆ. ದಶಕಗಳಿಂದಲೂ ಎಂಇಎಸ್ ಮತ್ತು ಶಿವಸೇನೆಯು ಬೆಳಗಾವಿ ಗಡಿ ಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗಲ ಮಧ್ಯೆ ಭಾಷಾ ಸಾಮರಸ್ಯ ಕದಡುವಂತೆ ಸದಾದ್ವೇಷ ಭಾಷಣ ಮಾಡುತ್ತಿದ್ದಾರೆ. ಈ ಮೂಲಕ ರಾಜಕೀಯ ದುರ್ಲಾಭ ಪಡೆಯಲು ಸದಾ ಪ್ರಯತ್ನಿಸುತ್ತಿದ್ದಾರೆ. ಈ ಕೃತ್ಯದಿಂದ ಕರ್ನಾಟಕದ ಸಮಸ್ತ ಕನ್ನಡಿಗರಿಗೆ ಅವಮಾನವಾಗುತ್ತಿದೆ ಎಂದರು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯವರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಹಿಂದೆ ವಿಘ್ನಗೊಳಿಸಿದ್ದರು. ಇಂತಹವರ ದುಷ್ಕೃತ್ಯಗಳಿಂದ ರೋಸಿದ್ದ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದು ಬೀದಿಗಿಳಿದು ಹೋರಾಡಿ, ಎಂಇಎಸ್, ಶಿವಸೇನೆಯವರನ್ನು ಕರ್ನಾಟಕದಿಂದಲೇ ಗಡೀಪಾರು ಮಾಡುವಂತೆ ಒತ್ತಾಯಿಸಿ ಸಿಎಂಗೆ ಮನವಿ ಅರ್ಪಿಸಿದ್ದರು. ನಾಡದ್ರೋಹಿ ಸಂಘಟನೆಗಳಾದ ಎಂಇಎಸ್, ಶಿವಸೇನೆ ಸಂಘಟನೆಗಳನ್ನು ರಾಜ್ಯದಲ್ಲಿ ತಕ್ಷಣವೇ ನಿಷೇಧಿಸಬೇಕು. ಒಂದು ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ವಿಶ್ವ ಕರವೇ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ವಿಶ್ವ ಕರವೇ ಮುಖಂಡರಾದ ಎಂ.ರವಿ, ಬಾಬುರಾವ್, ಸಂತೋಷ ದೊಡ್ಮನಿ, ಬಿ.ಇ.ದಯಾನಂದ, ಎಸ್.ಸಿದ್ದೇಶ, ಬಿ.ಮಂಜುನಾಥ, ಶಾಹಬಾಜ್, ಜಬೀವುಲ್ಲಾ. ಕೆ.ಎಚ್.ಮಹಬೂಬ್, ನವೀನ ಅಂದನೂರು, ಗಿರೀಶ ನವಲೆ, ಫಾರೂಕ್, ಹಟೇಲಿ ಶಾರುಖ್, ಅಶ್ಮಿ, ಹನುಮಂತಪ್ಪ, ಗದಿಗೆಪ್ಪ ವಾಸನ, ಶಾರುಖ್‌, ಮಂಜುನಾಥ ಶೆಟ್ಟಿ, ಇಮ್ರಾನ್, ಬಿ.ವಿ.ಮಂಜುನಾಥ, ಕಾಶಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ