ಹೊಸಪೇಟೆ: ಐತಿಹಾಸಿಕ ಸ್ಮಾರಕಗಳನ್ನು ಆಗಸದಿಂದ ಕಣ್ತುಂಬಿಕೊಳ್ಳಲು ವಿಜಯನಗರ ಜಿಲ್ಲಾಡಳಿತ ಹಂಪಿ ಉತ್ಸವದಲ್ಲಿ ವ್ಯವಸ್ಥೆ ಮಾಡುತ್ತಿದ್ದು, ಹೆಲಿಕಾಪ್ಟರ್‌ನಲ್ಲಿ ಕುಳಿತು ಸ್ಮಾರಕಗಳ ವೀಕ್ಷಣೆಗಾಗಿ ಲೋಹದ ಹಕ್ಕಿಗಳನ್ನು ಬುಕ್ ಮಾಡಲಾಗುತ್ತಿದೆ.
ಹಂಪಿ ಉತ್ಸವ ಫೆ.28, ಮಾ.1, 2ರಂದು ನಡೆಯಲಿದೆ. ಉತ್ಸವಕ್ಕಾಗಿ ಭರದ ಸಿದ್ಧತೆಯೂ ನಡೆದಿದೆ. ಹಂಪಿಯ ಸ್ಮಾರಕಗಳನ್ನು ಆಗಸದಿಂದ ನೋಡಲು ಭಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಬಾರಿಯೂ ಉತ್ಸವದಲ್ಲಿ "ಹಂಪಿ ಬೈ ಸ್ಕೈ " ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲು ಎರಡು ಹೆಲಿಕಾಪ್ಟರ್ ಸಂಸ್ಥೆಗಳ ಜತೆಗೆ ಮಾತುಕತೆ ನಡೆದಿದೆ. ಚಿಪ್ಸನ್ ಸಂಸ್ಥೆ ಹಾಗೂ ತಂಬಿ ಸಂಸ್ಥೆಗಳ ಜತೆಗೆ ಮಾತುಕತೆ ನಡೆದಿದೆ. ತಲಾ ಒಂದೊಂದು ಹೆಲಿಕಾಪ್ಟರ್‌ಗಳನ್ನು ಕಳುಹಿಸಲು ಈ ಸಂಸ್ಥೆಗಳು ಮುಂದಾಗಿವೆ. ಈ ಮಾತುಕತೆ ಫಲಪ್ರದವಾದರೆ, ಹಂಪಿ ಉತ್ಸವದ ಸಂದರ್ಭದಲ್ಲಿ ಆಗಸದಲ್ಲಿ ಮತ್ತೊಮ್ಮೆ ಹೆಲಿಕಾಪ್ಟರ್‌ಗಳು ಹಾರಾಡಲಿವೆ.ಸ್ಮಾರಕಗಳ ಸೊಬಗು: ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಆವರಣದ ಹೆಲಿಪ್ಯಾಡ್‌ನಿಂದ ಹಾರಾಟ ನಡೆಸುವ ಈ ಹೆಲಿಕಾಪ್ಟರ್‌ಗಳು ಏಳು ನಿಮಿಷ ಆಗಸದಲ್ಲಿ ಹಾರಾಡಲಿವೆ. ಒಂದು ಹೆಲಿಕಾಪ್ಟರ್‌ನಲ್ಲಿ ಐದು ಜನರು ತೆರಳಲು ಅವಕಾಶವಿದೆ. ಮಾತುಕತೆ ಫಲಪ್ರದವಾದ ಬಳಿಕ ದರ ನಿಗದಿಯಾಗಲಿದೆ ಎಂದು ವಿಜಯನಗರ ಜಿಲ್ಲಾಡಳಿತದ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.
ಹಂಪಿ ಉತ್ಸವದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಈ ಸಂಬಂಧ ಚರ್ಚೆ ನಡೆದಿದೆ. ಹಂಪಿ ಬೈ ಸ್ಕೈ ಕಾರ್ಯಕ್ರಮ ಮೂಲಕ ಆಗಸದಿಂದ ಸ್ಮಾರಕಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.