ಪೆಟ್ರೋಲ್‌ ಬಂಕ್‌ಗಳಲ್ಲಿ ಅಳತೆ ವಂಚನೆ: ರಿಜ್ವಾನ್‌

KannadaprabhaNewsNetwork |  
Published : Sep 17, 2026, 01:15 AM IST
ಪೆಟ್ರೋಲ್‌ ಬಂಕ್‌ | Kannada Prabha

ಸಾರಾಂಶ

ರಾಜ್ಯದ ಬಹುಪಾಲು ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರು ನೀಡುತ್ತಿರುವ ಹಣಕ್ಕೆ ನಿಖರವಾದ ಅಳತೆಯ ಇಂಧನ ದೊರೆಯದೆ, ಮೋಸ ನಡೆಯುತ್ತಿರುವುದು ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯೇ ನಡೆಸಿದ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ರಾಜ್ಯದ ಬಹುಪಾಲು ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರು ನೀಡುತ್ತಿರುವ ಹಣಕ್ಕೆ ನಿಖರವಾದ ಅಳತೆಯ ಇಂಧನ ದೊರೆಯದೆ, ಮೋಸ ನಡೆಯುತ್ತಿರುವುದು ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯೇ ನಡೆಸಿದ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ರಿಜ್ವಾನ್‌ ಅರ್ಷದ್‌, ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್​ಗಳಿದ್ದು, ಗ್ರಾಹಕರಿಂದ ಬಂದ ದೂರು ಆಧರಿಸಿ ಕಳೆದ ಒಂದು ವಾರದಲ್ಲಿ ಇಲಾಖಾ ಅಧಿಕಾರಿಗಳು ನಡೆಸಿದ 805 ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ 768 ಬಂಕ್​ಗಳಲ್ಲಿ ನಿಖರವಾದ ಅಳತೆಯಲ್ಲಿ ಇಂಧನ ದೊರೆಯದೇ ಇರುವುದು ಪತ್ತೆಯಾಗಿದೆ. ಅಂದರೆ ಶೇ.95 ರಷ್ಟು ಬಂಕ್‌ಗಳಲ್ಲಿ ನಿಖರ ಪ್ರಮಾಣದಲ್ಲಿ ಗ್ರಾಹಕರಿಗೆ ಇಂಧನ ನೀಡುತ್ತಿಲ್ಲ. ಈ ಪೈಕಿ 101 ಬಂಕ್​ಗಳ ಮೇಲೆ ಪ್ರಕರಣ ದಾಖಲಿಸಿ 6.66 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.ಶೇ.85 ನೋಸಲ್ಸ್‌ನಲ್ಲಿ ವ್ಯತ್ಯಾಸ:

805 ಪೆಟ್ರೋಲ್ ಬಂಕ್​ಗಳಲ್ಲಿನ 3,071 ನೋಸಲ್ಸ್ (ಪೆಟ್ರೋಲ್ ಗನ್) ಪೈಕಿ 2,618 ನೋಸಲ್ಸ್​ನಲ್ಲಿ ಪೆಟ್ರೋಲ್ ಕೊರತೆ ಬಂದಿದೆ. ಶೇ.85 ನೋಸಲ್ಸ್​ನಲ್ಲಿ ಸರಿಯಾದ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ವಿತರಣೆ ಆಗುತ್ತಿಲ್ಲ. ಕೇಂದ್ರ ಸರ್ಕಾರ ನಿಯಮದ ಪ್ರಕಾರ 5 ಲೀಟರ್​ನಲ್ಲಿ 0.5% ವ್ಯತ್ಯಾಸ ಇರಬಹುದು. ಅಂದರೆ, 25 ಎಂಎಲ್ ವರೆಗೆ ವ್ಯತ್ಯಾಸ ಆಗಬಹುದಾಗಿದೆ. ಕೆಲ ಬಂಕ್​ಗಳಲ್ಲಿ 50 ಎಂಎಲ್‌ಗಿಂತ ಹೆಚ್ಚು ವ್ಯತ್ಯಾಸ ಕಂಡು ಬಂದಿದೆ ಎಂದು ಸಚಿವರು ವಿವರಿಸಿದರು.

ಕೇಂದ್ರದ ಅಧಿಸೂಚನೆ ಒಪ್ಪುವುದಿಲ್ಲ:ಕೇಂದ್ರ ಸರ್ಕಾರ ಪೆಟ್ರೋಲ್‌ ಬಂಕ್‌ಗಳನ್ನು ವರ್ಷಕ್ಕೊಮ್ಮೆ ರಿಕ್ಯಾಲಿಬರೇಷನ್‌ ಮಾಡಬೇಕೆಂದಿದ್ದ ನಿಯಮವನ್ನು ಎರಡು ವರ್ಷಗಳಿಗೆ ಹೆಚ್ಚಿಸಿರುವುದು ಹಾಗೂ ತಪಾಸಣೆಯ ಅಧಿಕಾರವನ್ನು ಖಾಸಗಿಯವರಿಗೂ ನೀಡಿರುವುದು ಅವೈಜ್ಞಾನಿಕ. ಆದರೆ, ಇದನ್ನು ಒಪ್ಪಿದರೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚು ಹೊಡೆತ ಬೀಳದೆ ಇರದು. ಬಂಕ್‌ಗಳಲ್ಲಿನ ವ್ಯತ್ಯಾಸವನ್ನು ಖಾಸಗಿಯವರಿಂದ ನಿಯಂತ್ರಿಸಲು ಸಾಧ್ಯವಾ? ಹೀಗಾಗಿ ಇದನ್ನು ವಾಪಸ್‌ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಅಳತೆಯಲ್ಲಿ ಅನುಮಾನ ಬಂದರೆ ಕರೆ ಮಾಡಿ:ಗ್ರಾಹಕರು ಯಾವುದೇ ಪೆಟ್ರೋಲ್‌ ಬಂಕ್‌ನಲ್ಲಿ ತಾವು ಪಡೆಯುವ ಪೆಟ್ರೋಲ್‌, ಡೀಸೆಲ್‌ ಸೇರಿ ಯಾವುದೇ ಇಂಧನದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಲೋಪ, ವ್ಯತ್ಯಾಸದ ಅನುಮಾನ ಬಂದರೆ ದೂರು ನೀಡಲು ಟೋಲ್‌ ಫ್ರೀ ಸಹಾಯವಾಣಿ ಸಂಖ್ಯೆ 18005991100 ಜಾರಿ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ಪ್ರತಿ ಪೆಟ್ರೋಲ್‌ ಬಂಕ್‌ಗಳಲ್ಲೂ ಪ್ರಕಟಿಸಿರಬೇಕು. ಅಥವಾ ಇ-ಮೇಲ್ ವಿಳಾಸ clm-lm-ka@nic.inಗೆ ದೂರು ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಇಲಾಖೆಯಲ್ಲಿ ಆನ್​ಲೈನ್ ಡ್ಯಾಷ್​ಬೋರ್ಡ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ತಪಾಸಣೆ ಯಾವ ದಿನಾಂಕದಂದು ಆಗಿದೆ, ಯಾವಾಗ ಮುಂದೆ ತಪಾಸಣೆ ಮಾಡಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಬಂಕ್​ಗಳಲ್ಲಿ ಕಡ್ಡಾಯವಾಗಿ ಐದು ಲೀಟರ್ ಕ್ಯಾನ್ ಇಟ್ಟಿರಬೇಕು. ಗ್ರಾಹಕರ ಹಕ್ಕುಗಳೇನು ಎಂಬ ಬಗ್ಗೆ ಮಾಹಿತಿಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಪಂಗಳಲ್ಲೂ ಹೊಸ ನಾಯಕರು ಬೆಳೀಬೇಕು : ಡಿಕೆ
ಗಣೇಶನ ಬದಲು ಇಲಿರಾಯನಿಗೆ ಪೂಜೆ!