ಗಣೇಶನ ಬದಲು ಇಲಿರಾಯನಿಗೆ ಪೂಜೆ!

Published : Sep 16, 2026, 10:58 AM IST
Rats

ಸಾರಾಂಶ

ಎಲ್ಲಿ ನೋಡಿದರೂ ಗಣೇಶನ ಪೂಜೆ ಸಂಭ್ರಮವಾದರೆ ವಿಜಯನಗರ ಜಿಲ್ಲೆ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳು ಅಲ್ಲದೇ ಬಳ್ಳಾರಿ, ಚಿತ್ರದುರ್ಗ, ಹಾವೇರಿ ಹಾಗೂ ಆಂಧ್ರದ ಅನಂತಪುರ ಜಿಲ್ಲೆ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ವಾಸಿಸುವ ನೇಕಾರ ಸಮುದಾಯದವರು ಮಾತ್ರ ಗಣೇಶನ ಬದಲಿಗೆ ವಿಘ್ನನಿವಾರಕನ ವಾಹನವಾದ ಇಲಿರಾಯನ ಮಣ್ಣಿನ ಮೂರ್ತಿ ಮಾಡಿ 3 ದಿನ ವಿಶೇಷ ಪೂಜೆ

 ಭೀಮಣ್ಣ ಗಜಾಪುರ

 ಕೂಡ್ಲಿಗಿ : ಎಲ್ಲಿ ನೋಡಿದರೂ ಗಣೇಶನ ಪೂಜೆ ಸಂಭ್ರಮವಾದರೆ ವಿಜಯನಗರ ಜಿಲ್ಲೆ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳು ಅಲ್ಲದೇ ಬಳ್ಳಾರಿ, ಚಿತ್ರದುರ್ಗ, ಹಾವೇರಿ ಹಾಗೂ ಆಂಧ್ರದ ಅನಂತಪುರ ಜಿಲ್ಲೆ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ವಾಸಿಸುವ ನೇಕಾರ ಸಮುದಾಯದವರು ಮಾತ್ರ ಗಣೇಶನ ಬದಲಿಗೆ ವಿಘ್ನನಿವಾರಕನ ವಾಹನವಾದ ಇಲಿರಾಯನ ಮಣ್ಣಿನ ಮೂರ್ತಿ ಮಾಡಿ 3 ದಿನ ವಿಶೇಷ ಪೂಜೆ ಮಾಡಿ ಗಣೇಶನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ನೇಕಾರರು ತಮ್ಮ ಕುಲಕಸುಬಾದ ಬಟ್ಟೆ ನೇಯ್ಗೆಗೆ ತೊಂದರೆ ಬಾರದಿರಲಿ ಎಂದು ಬೇಡಿಕೊಳ್ಳುವ ಸಲುವಾಗಿ ಗಣೇಶನ ಮೂರ್ತಿ ಬದಲು ಇಲಿರಾಯನ ಮೂರ್ತಿ ಕೂರಿಸುತ್ತಾರೆ. ನೇಕಾರರು ಬಟ್ಟೆ, ಸೀರೆ ಹೆಣೆಯಲು ದುಬಾರಿಯ ರೇಷ್ಮೆ ಇತರ ನೂಲು ತಂದು ತಮ್ಮ ಮನೆಗಳಲ್ಲಿ ಇಟ್ಟಿರುತ್ತಾರೆ. ಮನೆಯಲ್ಲಿನ ಇಲಿಗಳು ನೂಲು ಕಡಿದು ಬಿಟ್ಟರೆ ಸಹಸ್ರಾರು ರುಪಾಯಿ ನಷ್ಟವನ್ನು ನೇಕಾರರೇ ಹೊರಬೇಕಾಗುತ್ತಿದೆ. ನೂರು ಇನ್ನೂರು ಕೂಲಿಗಾಗಿ ಸಾವಿರಾರು ಮೌಲ್ಯದ ರೇಷ್ಮೆ ನೂಲನ್ನು ತಂದು ಬಟ್ಟೆಯ ನೇಯುವ ಕುಟುಂಬಗಳಿಗೆ ನೂಲನ್ನು ಇಲಿಗಳು ಕಡಿದುಬಿಟ್ಟರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಹೀಗಾಗಿ ಇವರು ಇಲಿರಾಯನಿಗೆ ದೇವರ ಸ್ಥಾನಮಾನ ನೀಡುತ್ತಾರೆ. ಇಲಿರಾಯ ನಮ್ಮ ನೂಲು ಕಡಿಯದಿರಲಿ ಎಂದು ಪ್ರತಿ ವರ್ಷ ಗಣೇಶನ ಹಬ್ಬದ ಸಂದರ್ಭದಲ್ಲಿ 3 ದಿನ ಇಲಿರಾಯನ ಮೂರ್ತಿ ಕೂರಿಸಿ, ಪೂಜಿಸಿ, ಸಿಹಿ ಮಾಡಿ ನೇಕಾರ ಕುಟುಂಬದರವರೆಲ್ಲರೂ ಸಂಭ್ರಮಿಸುತ್ತಾರೆ.

ನೂಲು ಮುಟ್ಟುವ ಹಾಗಿಲ್ಲ:

ಗಣೇಶನಂತೆ ಮಣ್ಣಿನಿಂದ ಮಾಡಿದ ಇಲಿರಾಯನ ಮೂರ್ತಿಯನ್ನು 3 ದಿನ ಮನೆಯಲ್ಲಿ ಕೂರಿಸಿ ಪ್ರತಿದಿನ ಕುಟುಂಬದವರೆಲ್ಲರೂ ಭಕ್ತಿಯಿಂದ ಪೂಜೆ ಮಾಡಿ, 3 ದಿನಗಳ ನಂತರ ಇಲಿರಾಯನನ್ನು ನೀರಿಗೆ ಬಿಡುತ್ತಾರೆ. ನೀರಲ್ಲಿ ಬಿಡುವಾಗ ಕಡುಬನ್ನು ಜತೆಗೆ ಬಿಟ್ಟು ಬರುತ್ತಾರೆ. ಇಲಿ ಮೂರ್ತಿ ಜತೆಗೆ ತಮಗೆ ಅನ್ನ ನೀಡುವ ಕೈಮಗ್ಗಕ್ಕೂ ಗಣೇಶನ ಹಬ್ಬದ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಾರೆ. ಆದರೆ ಯಾರೂ 3 ದಿನ ನೇಯ್ಗೆ ಮಾಡುವುದಿಲ್ಲ. ಪೂರ್ವಜರ ಕಾಲದಿಂದಲೂ ಇಂತಹ ಆಚರಣೆ ಮಾಡುತ್ತಾ ಬಂದಿದ್ದಾರೆ. ನೂಲು ನೇಯ್ಗೆಯಿಂದ ಜೀವನ ಸಾಗಿಸುವ ನೇಕಾರ ಕುಟುಂಬಗಳಿಗೆ ನೂಲಿನ ದರ ಹೆಚ್ಚಳ ಆಗುತ್ತಿದ್ದು, ನೇಯುವ ಕೂಲಿ ದರ ಕಡಿಮೆ ಆಗುತ್ತಿದ್ದರಿಂದ ಬಹುತೇಕ ನೇಕಾರರು ಈಗ ತಮ್ಮ ಕುಲಕಸುಬು ಬಿಟ್ಟು ಬೇರೆ ಉದ್ಯೋಗ ಆರಂಭಿಸಿದ್ದಾರೆ.

ಇಲಿಯೇ ಶ್ರೇಷ್ಠ ದೇವರು

ನಾವ್ಯಾರೂ ಗಣೇಶನನ್ನು ಕೂರಿಸೋದಿಲ್ಲ ಸಾರ್, ಇಲಿಚಪ್ಪನೇ ನಮ್ಗೆ ಶ್ರೇಷ್ಠ ದೇವ್ರು, ಗಣೇಶನ ಮೂರ್ತಿಯಂತೆ ಇಲಿಚಪ್ಪನ ಮೂರ್ತಿ ತಂದು 3 ದಿನ ಮನೆಯಲ್ಲಿ ಕೂಡ್ಸಿ ಕಡುಬು ಮಾಡಿ ಕಡುಬಿನ ಜತೆಗೇ ನೀರಲ್ಲಿ ಬಿಟ್ಟು ಬರ್ತೀವಿ. ಮೂರು ದಿನ ಯಾವ ನೇಕಾರರು ನೂಲು ಮುಟ್ಟೋದಿಲ್ಲ, ಕೈಮಗ್ಗದಲ್ಲಿ ಬಟ್ಟೆ ನೇಯೋದಿಲ್ಲ, ಒಂದು ವೇಳೆ ಬಟ್ಟೆ ನೇಯ್ದರೆ ಕೇಡು ಕಟ್ಟಿಟ್ಟ ಬುತ್ತಿ.

-ವೀರಣ್ಣ, ನೇಕಾರ ಸಮಾಜದ ಹಿರಿಯ

3 ದಿನ ಪೂಜೆ

ಕೂಡ್ಲಿಗಿ ತಾಲೂಕಿನ ಉಜ್ಜಿನಿ, ಬೆನಕನಹಳ್ಳಿ, ರಾಂಪುರ, ಹೊಸಹಳ್ಳಿ, ಹೂಡೇಂ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಾಗಿ ನಮ್ಮ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಪ್ರತಿವರ್ಷ ಗಣೇಶನ ಹಬ್ಬ ಬಂತೆಂದರೆ ನಾವು ಮಾತ್ರ ಅಂದು ಗಣೇಶನ ಕೂರಿಸುವ ದಿನವೇ ಗಣೇಶನ ಮೂರ್ತಿ ಬದಲಾಗಿ ಇಲಿಚಪ್ಪನ ಮೂರ್ತಿ ಎಲ್ಲರ ಮನೆಯಲ್ಲಿ ಮೂರು ದಿನ ಕೂರಿಸಿ ಅಡಿಮುಡಿಯಿಂದ ಪೂಜೆ ಸಲ್ಲಿಸಿ ಹಬ್ಬಆಚರಿಸುವುದು ಪರಂಪರೆಯಿಂದಲೂ ಬಂದಿದೆ.

-ಅಣಜಿ ಭೀಮಣ್ಣ, ಉಜ್ಜಿನಿಯ ನೇಕಾರ ಕುಟುಂಬದ ಯುವಕ

PREV
Read the latest news, updates and stories from Vijayanagara district (ವಿಜಯನಗರ ಸುದ್ದಿ) in Karnataka on Kannada Prabha. Coverage includes local governance, development works, agriculture, tourism (including Hampi and heritage), environment, crime, social issues, and district events.
Read more Articles on

Recommended Stories

ಬೆಂಗಳೂರಿನವರು ವಿಜಯಪುರಕ್ಕೆ ಬರುವ ದಿನ ಬರಲಿದೆ: ಬಸನಗೌಡ ಪಾಟೀಲ
ಅಕ್ಟೋಬರ್‌ನಲ್ಲಿ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆ: ಶಾಸಕ ಗವಿಯಪ್ಪ