ಬಾರದ ಮಳೆ : ಕೂಡ್ಲಿಗಿ ತಾಲೂಕಿನ ಹಳ್ಳಿಹಳ್ಳಿಗಳಿಂದ ಜನರ ಗುಳೆ!

Published : Jul 05, 2026, 07:42 AM IST
Rain Deficit Forces Kudligi Farmers to Migrate to Cities

ಸಾರಾಂಶ

ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!

 ಭೀಮಣ್ಣ ಗಜಾಪುರ

  ಕೂಡ್ಲಿಗಿ (ವಿಜಯನಗರ) :  ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!

ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾ, ಗೋವಿಂದಗಿರಿ, ಬಂಡೆಬಸಾಪುರ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ಜನತೆ ಗುಳೆ ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. 2 ದಿನಗಳ ಹಿಂದೆ ಶ್ರೀಕಂಠಾಪುರ ತಾಂಡಾದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಸದಾ ಬರವನ್ನೇ ಹಾಸಿ ಹೊದ್ದು ಮಲಗುವ ಕೂಡ್ಲಿಗಿ ತಾಲೂಕಿನಲ್ಲಿ ಈಗ್ಗೆ 4-5 ವರ್ಷಗಳ ಕಾಲ ಉತ್ತಮ ಮಳೆಯಾಗಿತ್ತು. ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಸಸಿ ಇದ್ದಾಗಲೇ ಕಮರಿ ಹೋಗಿವೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲು ಇಲ್ಲಿಯ ರೈತರಿಗೆ ಗುಳೆ ಅನಿವಾರ್ಯವಾಗಿದೆ.

ಕೆಲ ಕುಟುಂಬಗಳು ಬೆಂಗಳೂರು ಕಡೆಗೆ ಹೋಗಿ ಅಲ್ಲಿ ಗಾರೆ ಕೆಲಸ ಮಾಡಲು ಮುಂದಾಗಿದ್ದಾರೆ. ಕುಟುಂಬದ ಹೆಣ್ಣು ಮಕ್ಕಳು ಬೆಂಗಳೂರಿನ ಮನೆಗಳಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬೆಂಗಳೂರಿಗೆ ಶೇ.30ರಷ್ಟು ಮಾತ್ರ ಹೋಗಿದ್ದಾರೆ. ಉಳಿದಂತೆ ಶೇ.70ರಷ್ಟು ಜನರು ಮೈಸೂರು, ಮಂಡ್ಯ, ಕಿಕ್ಕೇರಿ, ಚನ್ನರಾಯಪಟ್ಟಣ, ಮಂಗಳೂರು, ಚಿಕ್ಕಮಗಳೂರು ಕಡೆಗೆ ಕಬ್ಬು ಕಟಾವು, ಕಾಫಿ ಬೀಜ ಬಿಡಿಸುವ ಕಾರ್ಯಕ್ಕೆ ತೆರಳುತ್ತಿದ್ದಾರೆ.

ಉಳಿದಂತೆ ವಯಸ್ಸಾದವರು, ಶಾಲೆಗೆ ಹೋಗುವ ಮಕ್ಕಳು ಮಾತ್ರ ಗ್ರಾಮಗಳಲ್ಲಿ ಉಳಿದುಕೊಂಡಿದ್ದಾರೆ. ತಂದೆ- ತಾಯಿ ಇಲ್ಲದೆ ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಮಾತ್ರ ಆ ದೇವರಿಗೆ ಪ್ರೀತಿ. ಆ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಹೊರುವವರು ಯಾರು? ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದ್ದು, ಜೊತೆಗೆ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಉದಾಹರಣೆ ಕಣ್ಣ ಮುಂದೆ ಕಾಣಬಹುದಾಗಿದೆ.

2 ದಿನಗಳ ಹಿಂದೆ ರಾತ್ರೋರಾತ್ರಿ ತಾಲೂಕಿನ ಶ್ರೀಕಂಠಾಪುರ ತಾಂಡಾದಿಂದ ವೆಂಕಟೇಶನಾಯ್ಕ ಎನ್ನುವ ಮೇಸ್ತ್ರಿ ನೇತೃತ್ವದಲ್ಲಿ 3 ಲಾರಿಗಳಲ್ಲಿ ನಿತ್ಯದ ಬಳಕೆಯ ವಸ್ತುಗಳು, ಪಾತ್ರೆ, ಬಿಂದಿಗೆ ಸೇರಿದಂತೆ ಮಕ್ಕಳು ಮರಿಗಳನ್ನು ಹೊತ್ತುಕೊಂಡು ಸುಮಾರು 50 ಜನರು ತುತ್ತಿನ‌ ಚೀಲ ತುಂಬಿಸಿಕೊಳ್ಳಲು ಹೊರಟಿದ್ದು ನೋಡುಗರ ಮನ ಕಲಕಿತು. ತಾಂಡಾಗಳ ಜನರು ಬಯಲು ಸೀಮೆಯಿಂದ ಕಾಫಿ ಸೀಮೆಯತ್ತ ಗುಳೆ ಹೊರಟಿದ್ದಾರೆ.

ತಾಲೂಕಿನ ತಾಂಡಾಗಳು ಸೇರಿದಂತೆ ಅನೇಕ ಗ್ರಾಮದ ಜನರು ಗುಳೆ ಹೋಗುತ್ತಿದ್ದಾರೆ. ಅದಕ್ಕೆ ಸರ್ಕಾರ ನರೇಗಾದಂತಹ ಯೋಜನೆ ಜಾರಿಗೊಳಿಸಿದೆ. ಆದರೆ ಅದು ಕೇವಲ 3 ತಿಂಗಳ ಕೆಲಸ ಮಾತ್ರ. ಮುಂದೇನು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಾವು ಮಲೆನಾಡು ಕಡೆ ಜೀವನ ಮಾಡಲು ಹೋಗುತ್ತಿದ್ದೇವೆ.

-ಕುಬೇರನಾಯ್ಕ, ಶ್ರೀಕಂಠಾಪುರ ತಾಂಡಾದ ಕೂಲಿಕಾರ್ಮಿಕ 

ಜನರು ಹೋಗುತ್ತಿರುವುದು ಎಲ್ಲಿಗೆ?

30% ಜನರು: ಬೆಂಗಳೂರಿನತ್ತ ಹೊರಟಿದ್ದಾರೆ. ಅಲ್ಲಿ ಗಂಡಸರು ಗಾರೆ ಕೆಲಸ ಮಾಡಿದರೆ, ಹೆಂಗಸರು ಮನೆ ಕೆಲಸ ಮಾಡಲಿದ್ದಾರೆ

70% ಜನರು: ಮೈಸೂರು, ಮಂಡ್ಯ, ಚನ್ನರಾಯಪಟ್ಟಣ, ಚಿಕ್ಕಮಗಳೂರಿನಲ್ಲಿ ಕಬ್ಬು ಕಟಾವು, ಕಾಫಿ ತೋಟಗಳಿಗೆ ತೆರಳುತ್ತಿದ್ದಾರೆ

ಗುಳೆ ಹೋಗದೆ ಬೇರೆ ದಾರಿಯೇ ನಮಗೆ ಇಲ್ಲ

ಮಳೆ ಬಾರದೆ ಬರದ ಛಾಯೆ ಆವರಿಸಿದೆ. ಹಾಗಾಗಿ ಗುಳೆ ಅನಿವಾರ್ಯ. ಈಗ ಒಂದಿಷ್ಟು ಮಂದಿ ಗುಳೆ ಹೋಗ್ತಿದಾರೆ. ಇನ್ನು ಕೆಲವರು 7 ಮಕ್ಕಳ ದೇವತೆಯ ಸೀಕ್ಲಾ ಹಬ್ಬ ಮುಗಿಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಹೊಲದಲ್ಲಿ ಬಾಕಿ ಇರುವ ಕೆಲಸ ಮುಗಿಸಿಕೊಂಡು ಹೋಗುತ್ತಾರೆ.

-ನಾಗರಾಜ್, ಶ್ರೀಕಂಠಾಪುರ ತಾಂಡಾದ ಯುವಕ

PREV
Read the latest news, updates and stories from Vijayanagara district (ವಿಜಯನಗರ ಸುದ್ದಿ) in Karnataka on Kannada Prabha. Coverage includes local governance, development works, agriculture, tourism (including Hampi and heritage), environment, crime, social issues, and district events.
Read more Articles on

Recommended Stories

ಜು.5ರೊಳಗೆ ಎಸ್‌ಐಆರ್ ನೋಂದಣಿ ಪ್ರಕ್ರಿಯೆ ಶೇ.100ರಷ್ಟು ಪೂರ್ಣಗೊಳಿಸಿ: ಡಾ.ಕೆ.ಜಿ. ಜಗದೀಶ
ಜು.8ರಂದು ಆರ್.ಎಸ್.ಎಸ್.ನೋಂದಣಿಗೆ ಒತ್ತಾಯಿಸಿ ಪ್ರತಿಭಟನೆ