ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿರುವ ಕೈಗಾರಿಕೆ ಕ್ರಾಂತಿಯ ಪರಿಣಾಮ ಮುಂದಿನ ದಿನಗಳಲ್ಲಿ ಬೆಂಗಳೂರಿನವರು ನೌಕರಿಗಾಗಿ ವಿಜಯಪುರ ಹುಡುಕಿಕೊಂಡು ಬರಲಿದ್ದಾರೆಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿರುವ ಕೈಗಾರಿಕೆ ಕ್ರಾಂತಿಯ ಪರಿಣಾಮ ಮುಂದಿನ ದಿನಗಳಲ್ಲಿ ಬೆಂಗಳೂರಿನವರು ನೌಕರಿಗಾಗಿ ವಿಜಯಪುರ ಹುಡುಕಿಕೊಂಡು ಬರಲಿದ್ದಾರೆಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಪಾಟೀಲ ಹೇಳಿದರು.

ಬಬಲೇಶ್ವರ-ತಿಕೋಟಾ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಆಯೋಜಿಸಿರುವ ಎಂಬಿಪಿ ಉತ್ಸವ ನಿಮಿತ್ತ ಅರಕೇರಿ ಗ್ರಾಮದಲ್ಲಿ ಹೆಣ್ಣುಮಕ್ಕಳ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬರಗಾಲದ ಸಂದರ್ಭದಲ್ಲಿ ಈ ಭಾಗದ ಜನರು ಉದ್ಯೋಗ ಅರಸಿ ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಅಲ್ಲದೆ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ಇತ್ತು. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ನಮ್ಮ ತಂದೆ ಎಂ.ಬಿ.ಪಾಟೀಲರು ನೀರಾವರಿ ಸಚಿವರಾದ ನಂತರ ಮೊದಲಿಗೆ ರೈತರಿಗೆ ನೀರಾವರಿ, ಕೈಗಾರಿಕೆ ಸಚಿವರಾದ ನಂತರ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಹೆಚ್ಚಿನ ಕಂಪನಿಗಳನ್ನು ವಿಜಯಪುರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗರು ವಿಜಯಪುರದತ್ತ ನೌಕರಿ ಅರಿಸಿಕೊಂಡು ಬರಲಿದ್ದಾರೆ ಎಂದರು.

ನಂತರ ಕನಮಡಿ ಗ್ರಾಮದಲ್ಲಿ ಸಂಜೆ ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ ಜಾನಪದ ಹಾಗೂ ದೇವರಗೆಣ್ಣೂರಿನಲ್ಲಿ ಭಜನಾಪದ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಸಂಜೆ ನಿಡೋಣಿಯಲ್ಲಿ ಭಜನಾ ಸ್ಪರ್ಧೆ ನಂತರ ದೇವರಗೆಣ್ಣೂರ ಗ್ರಾಮದಲ್ಲಿ ಜಾನಪದ ಹಾಡುಗಳ ಸ್ಪರ್ಧೆಯನ್ನು ಬಸನಗೌಡ ಪಾಟೀಲ ಉದ್ಘಾಟಿಸಿದರು.

ಎಂ.ಬಿ.ಪಾಟೀಲ ಅವರ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೃತಜ್ಞತಾ ಭಾವ ವ್ಯಕ್ತಪಡಿಸುವ ಉದ್ದೇಶದಿಂದ ಅಭಿಮಾನಿಗಳು, ಕಾರ್ಯಕರ್ತರು ಅಕ್ಟೋಬರ 7 ರಂದು ಅವರ ಜನ್ಮದಿನ ಪೂರ್ವ ಒಂದು ತಿಂಗಳ ವರೆಗೆ ದೇಶೀಯ ಆಟ ಕಬಡ್ಡಿ, ಕ್ರಿಕೆಟ್, ಭಜನೆ, ಜಾನಪದ ಹಾಡುಗಳು ಮತ್ತು ರಂಗೋಲಿ ಸ್ಪರ್ಧೆಗಳನ್ನು ವಿಭಿನ್ನವಾಗಿ ಆಯೋಜಿಸಿದ್ದಾರೆ. ಮುಖಂಡರಾದ ಪ್ರಶಾಂತ ಪಾಟೀಲ, ಪ್ರಕಾಶ ಬಿರಾದಾರ, ಗುರು ಮಾಳಿ, ಶಂಕರ ಹ್ಯಾಮಗೋಳ, ಸುರೇಶ ಬಾಬಾನಗರ, ವೀರೇಶ ಸಿಂಧೂರ, ಈಶ್ವರ ಯಳಜರಿ ಇದ್ದರು.