ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ವಿತರಕರ ಪಾತ್ರ ಮಹತ್ತರವಾಗಿದೆ, ಸರ್ಕಾರ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಮತ್ತು ಜೀವನ ಭದ್ರತೆ ಒದಗಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಒತ್ತಾಯಿಸಿದರು.

ಕನ್ನಡ್ರಭ ವಾರ್ತೆ ಅಥಣಿ

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ವಿತರಕರ ಪಾತ್ರ ಮಹತ್ತರವಾಗಿದೆ, ಸರ್ಕಾರ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಮತ್ತು ಜೀವನ ಭದ್ರತೆ ಒದಗಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಒತ್ತಾಯಿಸಿದರು.

ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯ ನಿಮಿತ್ತ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನಿಸಿ, ಉಡುಗೊರೆ ನೀಡಿ ಮಾತನಾಡಿದ ಅವರು, ಪತ್ರಕರ್ತರು ಸುದ್ದಿ ಸಂಗ್ರಹಿಸಿದರೆ, ಸಂಪಾದಕರು ಅದನ್ನು ಪರಿಶೀಲಿಸಿದ ನಂತರ ದಿನಪತ್ರಿಕೆಗಳು ಮುದ್ರಣಾಲಯದಲ್ಲಿ ಪ್ರಕಟವಾಗುತ್ತವೆ. ಮುದ್ರಣಗೊಂಡ ಪತ್ರಿಕೆಗಳನ್ನು ನಸುಕಿನ ವೇಳೆಯಲ್ಲಿ ಎದ್ದು ಓದುಗರ ಮನೆ, ಮನೆಗೆ ಮುಟ್ಟಿಸುವ ಕಾರ್ಯವನ್ನು ಪತ್ರಿಕಾ ವಿತರಕರು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದರು.ಪತ್ರಿಕಾ ವಿತರಕರ ಬದುಕಿನಲ್ಲಿ ಸವಾಲುಗಳಿಗೇನೂ ಕಡಿಮೆ ಇಲ್ಲ. ಮುಂಜಾನೆಯ ಕೆಲಸ, ಹವಾಮಾನದ ವೈಪರೀತ್ಯ, ಸಂಚಾರದ ಸಮಸ್ಯೆ ಮತ್ತು ಡಿಜಿಟಲ್ ಮಾಧ್ಯಮದ ಸ್ಪರ್ಧೆ ಇವೆಲ್ಲದರ ನಡುವೆ ಅವರು ತಮ್ಮ ಸೇವೆಯನ್ನು ಚಾಚೂತಪ್ಪದೆ ನಿರ್ವಹಿಸುತ್ತಿದ್ದಾರೆ. ಪತ್ರಿಕಾ ವಿತರಕರ ಕಠಿಣ ಪರಿಶ್ರಮಕ್ಕೆ ಸೂಕ್ತ ಗೌರವ, ಸಾಮಾಜಿಕ ಭದ್ರತೆ ದೊರೆಯುವ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಮಾತನಾಡಿ, ಪತ್ರಿಕಾ ವಿತರಕರ ಕೆಲಸ ಹೊರನೋಟಕ್ಕೆ ಸರಳವಾಗಿ ಕಾಣಬಹುದು. ಆದರೆ, ಅದರ ಹಿಂದೆ ಸಮಯಪಾಲನೆ, ಶಿಸ್ತು ಮತ್ತು ಜವಾಬ್ದಾರಿಯಿದೆ. ಒಂದು ದಿನ ಪತ್ರಿಕೆ ತಡವಾದರೂ ಓದುಗರಿಗೆ ಅಸಮಾಧಾನವಾಗುತ್ತದೆ. ಹೀಗಾಗಿ ಪ್ರತಿದಿನ ನಿಗದಿತ ಸಮಯಕ್ಕೆ ಪತ್ರಿಕೆ ತಲುಪಿಸುವ ಹೊಣೆಗಾರಿಕೆ ಅವರ ಮೇಲಿರುತ್ತದೆ. ಇದು ಕೇವಲ ಉದ್ಯೋಗವಲ್ಲ, ಮಾಹಿತಿಯನ್ನು ಜನರಿಗೆ ತಲುಪಿಸುವ ಸಾಮಾಜಿಕ ಸೇವೆಯಾಗಿದೆ. ಪತ್ರಿಕಾ ವಿತರಕರ ದಿನ ಅವರ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ಗಾಲಿ, ಕಾರ್ಯದರ್ಶಿ ಪರಶುರಾಮ ನಂದೇಶ್ವರ, ಖಜಾಂಚಿ ಶೇಖರ ತೆವರಟ್ಟಿ, ಕರವೇ ಅಧ್ಯಕ್ಷ ಶಬ್ಬೀರ ಸಾತುಬಚ್ಚೆ, ಶಿವಕುಮಾರ ಅಪರಾಜ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ರಮೇಶ ಬಾದವಾಡಗಿ, ಅಜಿತ್ ಕಾಂಬಳೆ, ಕಲ್ಲಪ್ಪ ಕನ್ನಾಳ, ಅಬ್ದುಲ್ ಜಬ್ಬಾರ್ ಚಿಂಚಲಿ, ಸಂದೀಪ ಘಟಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.