ಮಿಥೆನಾಲ್‌ ಗ್ಯಾಸ್ ಟ್ಯಾಂಕರ್‌ ಪಲ್ಟಿ: ಗ್ಯಾಸ್ ಸೋರಿಕೆ ತಡೆಗೆ ಕಾರ್ಯಾಚರಣೆ

KannadaprabhaNewsNetwork |  
Published : Nov 19, 2025, 01:30 AM IST
ಮಿಥೆನೆಲ ಗ್ಯಾಸ್ ತುಂಬಿಕೊAಡು ಸಂಚರಿಸುತ್ತಿದ್ದ ಟ್ಯಾಂಕರ್ ಅಗಸೂರಿನ ಕಂಚಿನ ಬಾಗಿಲು ಬಳಿ ಪಲ್ಟಿಯಾಗಿರುವದು.  | Kannada Prabha

ಸಾರಾಂಶ

ತಾಲೂಕಿನ ಅಗಸೂರಿನ ಕಂಚಿನ ಬಾಗಿಲು ಬಳಿ ಮಿಥೆನಾಲ್‌ ಗ್ಯಾಸ್ ತುಂಬಿಕೊಂಡು ಸಂಚರಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಅಗಸೂರಿನ ಕಂಚಿನ ಬಾಗಿಲು ಬಳಿ ಮಿಥೆನಾಲ್‌ ಗ್ಯಾಸ್ ತುಂಬಿಕೊಂಡು ಸಂಚರಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿರುವ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ 1ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಿಥೆನಾಲ್‌ ಗ್ಯಾಸ್ ಸೋರಿಕೆಯಾಗಿದ್ದರಿಂದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ನಂತರ ಅಂಕೋಲಾ–ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಯಾವುದೇ ಅನಾಹುತ ಸಂಭವಿಸದಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಸ್ಥಳಕ್ಕೆ ಸಾರ್ವಜನಿಕರ ಓಡಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಗುಜರಾತಿನ ಕಲೋಜನಿಂದ ಹೆಬ್ರಿ ವಿಶ್ವಾಸ ನಗರಕ್ಕೆ ಬರುತ್ತಿದ್ದ ಈ ಲಾರಿಯು ಚಾಲಕ ಪಾನಪತ್ತನಾಗಿ ಚಾಲನೆ ಮಾಡಿ ಈ ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ಪರಿಶೀಲನೆಗೆ ಒಳಪಡಿಸಲಾಗಿದೆ.

ಸ್ಥಳಕ್ಕೆ ಅಂಕೋಲಾ ತಹಸೀಲ್ದಾರ್‌ ಡಾ. ಚಿಕ್ಕಪ್ಪ ನಾಯಕ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಸರದಲ್ಲಿ ಮಿಥೆನಾಲ್‌ ಗ್ಯಾಸ್ ಸೋರಿಕೆ ತಡೆಯಲು ಉಡುಪಿಯಿಂದ ಕಂಪನಿಯ ತಾಂತ್ರಿಕ ಸಿಬ್ಬಂದಿ ಸಂಜೆ 6ಕ್ಕೆ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನೆಲೆ ಯಲ್ಲಾಪುರದಿಂದ ಅಂಕೋಲಾ ಹಾಗೂ ಅಂಕೋಲಾದಿಂದ ಯಲ್ಲಾಪುರ ಪ್ರಯಾಣಿಸುವ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸಕಂಬಿ–ಹಿಲ್ಲೂರು ಹಾಗೂ ಅಗಸೂರು–ಕೊಡ್ಸಣಿ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಸೋರಿಕೆ ತಡೆಗೆ ಕಾರ್ಯಾಚರಣೆ ಮುಂದುವರಿದಿದೆ.ಮಿಥೆನಾಲ್‌ ಗ್ಯಾಸ್ ಸೋರಿಕೆ: ನಿರ್ಬಂಧ

ರಾಷ್ಟ್ರೀಯ ಹೆದ್ದಾರಿ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಹತ್ತಿರ ಮಿಥೆನಾಲ್‌ ಗ್ಯಾಸ್ ಟ್ಯಾಂಕರ್ ಉರುಳಿ ಗ್ಯಾಸ್ ಸೋರಿಕೆ ಹಿನ್ನೆಲೆ ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಟ್ಯಾಂಕರ್ ತೆರವುಗೊಳಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಘಟನಾ ಸ್ಥಳದಿಂದ 1 ಕಿಮೀ ವ್ಯಾಪ್ತಿಯೊಳಗೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರ, ವಾಹನಗಳ ನಿಲುಗಡೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರತಿಬಂಧಕಾಜ್ಞೆ ಹೊರಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ