ಗಜೇಂದ್ರಗಡ: ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಉದ್ದೇಶದಿಂದ ವ್ಯಾಪಾರ ಹಾಗೂ ಉದ್ಯೋಗಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ದಿ. ಲಕ್ಷ್ಮೀ ಅರ್ಬನ್ ಕೋ- ಆಪ್ ಬ್ಯಾಂಕ್ ಮುಂದಾಗಿದೆ ಎಂದು ಬ್ಯಾಂಕಿನ ಚೇರ್ಮನ್, ಸಿಎ ಎಸ್.ಕೆ. ಚನ್ನಿ ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ದಿ. ಲಕ್ಷ್ಮೀ ಅರ್ಬನ್ ಕೋ- ಆಪ್ ಬ್ಯಾಂಕ್ ೧೧೩ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಜಿಲ್ಲೆಯ ಮಾದರಿ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ. ಸುರಕ್ಷತೆ ಹಾಗೂ ವಿಶ್ವಾಸಕ್ಕೆ ಹೆಸರಾಗಿರುವ ಬ್ಯಾಂಕ್‌ನ ಮುಖ್ಯ ಕಚೇರಿಯ ಮೊದಲನೇ ಮಹಡಿಯ ಕಟ್ಟಡದ ಉದ್ಘಾಟನೆಗೆ ಸಿದ್ಧತೆಗಳನ್ನು ಭರದಿಂದ ನಡೆಯುತ್ತಿವೆ ಎಂದರು.
ಪಟ್ಟಣದ ಪುರ್ತಗೇರಿ ಬಳಿಯ ಸಿಬಿಎಸ್‌ಸಿ ಶಾಲೆಯಲ್ಲಿ ನ. ೨೩ರಂದು ಬೆಳಗ್ಗೆ ೧೧ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಹಾಲಕೆರೆ- ಹೊಸಪೇಟೆಯ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಸಹಕಾರ ಸಂಘದ ಉಪನಿಬಂಧಕರಾದ ಎಸ್.ಎಸ್.ಕಬಾಡೆ, ಸಹಾಯಕ ನಿಬಂಧಕರಾದ ಪುಷ್ಪಾ ಕಡಿವಾಳ ಆಗಮಿಸಲಿದ್ದಾರೆ ಎಂದರು.ಬ್ಯಾಂಕ್‌ನ ನಿರ್ದೇಶಕರಾದ ಪಿ.ಎಸ್. ಕಡ್ಡಿ, ಡಾ. ಬಿ.ವಿ. ಕಂಬಳ್ಯಾಳ, ಎಸ್.ಎಸ್. ಪಟ್ಟೇದ, ವಿ.ಎಸ್. ನಂದಿಹಾಳ, ಕೆ.ಎಸ್. ಸಜ್ಜನರ, ಪಿ.ಬಿ. ಮ್ಯಾಗೇರಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ರಾಜು ಹೊಸಗಂಡಿ ಇತರರು ಇದ್ದರು.