ಹಿಂದೂ ಜಾಗರಣ ವೇದಿಕೆಯಿಂದ ಸಹಾಯಕ ಆಯುಕ್ತರು, ಡಿವೈಎಸ್ಪಿಗೆ ಮನವಿ
ಕನ್ನಡಪ್ರಭ ವಾರ್ತೆ ಭಟ್ಕಳದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಮತ್ತು ಪಟ್ಟಣದಲ್ಲಿ ಪದೇ ಪದೇ ರಾಜರೋಷವಾಗಿ ಗೋವು ಕಳ್ಳತನ ಮಾಡುತ್ತಿರುವುದನ್ನು ಖಂಡಿಸಿ ಸ್ಥಳೀಯ ಹಿಂದೂ ಜಾಗರಣ ವೇದಿಕೆಯಿಂದ ಸಹಾಯಕ ಆಯುಕ್ತರು ಮತ್ತು ಡಿವೈಎಸ್ಪಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ, ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿದರು. ಉನ್ನತ ಶಿಕ್ಷಣ ಪಡೆದವರೇ ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿರುವುದು ದುರಂತ. ಅಮಾಯಕರ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಭಟ್ಕಳದಲ್ಲಿ ನಡೆಯುತ್ತಿರುವ ಗೋವು ಕಳ್ಳತನದ ಬಗ್ಗೆಯೂ ತೀವ್ರವಾಗಿ ಖಂಡಿಸಿದ ಅವರು ನಾನು ಶಾಸಕನಾಗಿದ್ದ ಸಂದರ್ಭ ತಾಲೂಕಿನ ಚೆಕ್ ಪೋಸ್ಟ್‌ಗಳನ್ನು ಬಿಗುಗೊಳಿಸುವ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಪ್ರಸ್ತುತ ಚೆಕ್ ಪೋಸ್ಟ್‌ಗಳು ನಾಮಕಾವಸ್ತೆ ಆಗಿವೆ. ಚೆಕ್ ಪೋಸ್ಟ್ ಬಿಗುಗೊಳಿಸಬೇಕು. ಪೊಲೀಸರು ಗೋವು ಕಳ್ಳತನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಪ್ರಮುಖರಾದ ರಾಜೇಶ ನಾಯ್ಕ, ಶ್ರೀಕಾಂತ ನಾಯ್ಕ, ಈಶ್ವರ ನಾಯ್ಕ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರಾಮಕೃಷ್ಣ ನಾಯ್ಕ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಬಲವಾಗಿ ಖಂಡಿಸಿದ್ದಲ್ಲದೇ ತಾಲೂಕಿನಲ್ಲಿ ನಡೆಯುತ್ತಿರುವ ಗೋವು ಕಳ್ಳತನದ ಆರೋಪಿಗಳನ್ನು ಬಂಧಿಸಿ ಮುಂದೆ ಇಂತಹ ಕೃತ್ಯ ಆಗದಂತೆ ಗಮನಹರಿಸಬೇಕು ಎಂದು ಹೇಳಿದರು.ಸಹಾಯಕ ಆಯುಕ್ತೆ ಕಾವ್ಯರಾಣಿ ಮತ್ತು ಡಿವೈಎಸ್ಪಿ ಮಹೇಶ ಮನವಿ ಸ್ವೀಕರಿಸಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಜಯಂತ ನಾಯ್ಕ ಬೆಣಂದೂರು, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ರವಿ ನಾಯ್ಕ ಜಾಲಿ, ದಿನೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ರಾಘವೇಂದ್ರ ನಾಯ್ಕ, ಪ್ರಮೋದ ಜೋಷಿ, ಯಶೋಧರ ನಾಯ್ಕ, ನಾರಾಯಣ ಗೊಂಡ, ನಾಗೇಂದ್ರ ನಾಯ್ಕ ಮುಂತಾದವರಿದ್ದರು.