ಕನಕಗಿರಿ: ಮಹಿಳಾ ಶಿಕ್ಷಕಿಯೊಬ್ಬರನ್ನು ಗುರಿಯಾಗಿಸಿ ಸರ್ಕಾರಿ ಶಾಲಾ ಕಟ್ಟಡಕ್ಕೆ ಅಶ್ಲೀಲ ಬರಹ ಹಾಗೂ ಚಿತ್ರ ಬಿಡಿಸಿ ವಿಕೃತಿ ಮರೆದಿರುವ ಘಟನೆ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಈ ಹಿಂದೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿದ್ದ ದುಷ್ಕರ್ಮಿಗಳು ಅಶ್ಲೀಲವಾಗಿ ಬರೆದು ವಿಕೃತಿ ಮೆರೆದಿದ್ದರು. ಈ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದರು.
ಈ ಪ್ರಕರಣದ ನೆನಪು ಮಾಸುವ ಮುನ್ನವೇ ಎಂಎಚ್‌ಪಿಎಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ವಾತಾವರಣ ತೀರಾ ಹದಗೆಟ್ಟು ಹೋಗಿದೆ. ಅಶ್ಲೀಲ ಬರಹದಿಂದ ಬೇಸರಿಸಿದ್ದಾರೆ.ಕಿಡಿಗೇಡಿಗಳು ಶಾಲೆಯ ಎಲ್ಲೆಂದರಲ್ಲಿ ಪ್ರೇಮ ನಿವೇದನೆ, ಅಶ್ಲೀಲ ಬರವಣಿಗೆ, ಅಶ್ಲೀಲ ಚಿತ್ರ, ಮುಖ್ಯವಾಗಿ ನಾಮಫಲಕಕ್ಕೆ ಕಪ್ಪು ಮಸಿ ಬಳಿದಿರುವುದು, ಧ್ವಜ ಕಂಬಕ್ಕೆ ಅರೆ ಬರೆ ಬಣ್ಣ ಬಳಿಯಲಾಗಿದೆ. ಅಲ್ಲದೇ, ಶಾಲೆಯಲ್ಲಿ ನೆಟ್ ಕನೆಕ್ಷನ್‌ಗಾಗಿ ಅಳವಡಿಸಲಾಗಿದ್ದ ಬಾಕ್ಸ್‌ನ ಕೇಬಲ್ ಕಿತ್ತು, ಬಣ್ಣ ಬಳಿದಿದ್ದಾರೆ. ಇದು ಶಿಕ್ಷಕ ಹಾಗೂ ಪಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಜ್ಞಾನ ದೇಗುಲಗಳು ಕಿಡಿಗೇಡಿಗಳಿಂದ ಇಂತಹ ಕೃತ್ಯಕ್ಕೆ ಬಳಕೆಯಾಗುತ್ತಿರುವುದು ವಿಷಾದನೀಯವೇ ಸರಿ ಎಂದು ಹೇಳಿದ್ದಾರೆ.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ತಕ್ಕ ಶಾಸ್ತಿ ಮಾಡಬೇಕೆಂದು ಶಿಕ್ಷಣಪ್ರೇಮಿಗಳು ಒತ್ತಾಯಿಸಿದ್ದಾರೆ.ಪೊಲೀಸರಿಂದ ತನಿಖೆ ಆರಂಭ: ಶಾಲೆಯಲ್ಲಿ ಅಶ್ಲೀಲ ಬರಹ ಹಾಗೂ ಮಹಿಳಾ ಶಿಕ್ಷಕಿಯೊಬ್ಬರ ಹೆಸರು ಬಳಸಿ ಅವಾಚ್ಯವಾಗಿ ನಿಂದಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಮಂಗಳವಾರ ಸಂಜೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲೆಲ್ಲಿ ಅಶ್ಲೀಲ ಬರಹ ಬರೆದಿದ್ದಾರೆ. ಬರವಣಿಗೆಗೆ ಬಳಕೆಯಾದ ಪ್ಲಾಸ್ಲಿಕ್ ಗ್ಲಾಸ್, ಬ್ರೆಶ್ ಇತರ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.
ಕಳೆದ ಭಾನುವಾರ ತಡರಾತ್ರಿ ಶಾಲೆಯ ಹಲವು ಕಡೆಗಳಲ್ಲಿ ಈ ಕೃತ್ಯ ಎಸಗಿದ್ದು, ಸೋಮವಾರ ಶಾಲೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರೊಂದಿಗೆ, ಹಿರಿಯರ ಗಮನಕ್ಕೆ ತರಲಾಗಿದೆ ಎಂದು ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ ತಿಳಿಸಿದ್ದಾರೆ.ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಕನಕಗಿರಿ ಪಿಐ ಎಂ.ಡಿ. ಫೈಜುಲ್ಲಾ ತಿಳಿಸಿದ್ದಾರೆ.